ಕರ್ನಾಟಕಕ್ಕೆ ಬಿಗ್ ಶಾಕ್: ಸ್ಟಾರ್ಟ್ ಅಪ್ ಹೂಡಿಕೆ ಶೇ 40% ಕುಸಿತ!, ಉದ್ಯೋಗ ನಷ್ಟ ಸಾಧ್ಯತೆ
ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ಟ್‌ಅಪ್ ಹೂಡಿಕೆ ಬರೋಬ್ಬರಿ ಶೇ 40% ಕುಸಿತ ಕಂಡಿದೆ ಎಂದು ವರದಿಯಾಗಿದೆ. ಕಳೆದ 9 ತಿಂಗಳಲ್ಲಿ ಹೂಡಿಕೆ ಪ್ರಮಾಣದಲ್ಲಿ ದಿಢೀರ್ ಇಳಿಕೆ ಆಗಿರುವ ಬಗ್ಗೆ ಟ್ಯಾಕ್ಸನ್ ಬಿಡುಗಡೆ ಮಾಡಿದ ವರದಿಯಲ್ಲಿ ಬಹಿರಂಗವಾಗಿದೆ.
ಕರ್ನಾಟಕದ ಟೆಕ್ ಸ್ಟಾರ್ಟ್‌ಅಪ್‌ಗಳು 2025ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಕೇವಲ $2.7 ಬಿಲಿಯನ್ (ಸುಮಾರು ರೂ. 22, 00 ಕೋಟಿ) ಮೊತ್ತದಷ್ಟು ಮಾತ್ರ ಹೂಡಿಕೆಯಾಗಿದೆ. ಇದು 9ಎಂ 2024 ರಲ್ಲಿ ಸಂಗ್ರಹಿಸಿದ್ದ 4.5 ಬಿಲಿಯನ್ ಮೊತ್ತಕ್ಕೆ ಹೋಲಿಸಿದರೆ ಶೇ.40ರಷ್ಟು ಇಳಿಕೆಯಾಗಿದೆ ಎಂದು ಹೇಳಲಾಗಿದೆ.

9ಎಂ 2023 ರಲ್ಲಿ ಸಂಗ್ರಹಿಸಿದ್ದ 3.5 ಬಿಲಿಯನ್ ಮೊತ್ತಕ್ಕೆ ಹೋಲಿಸಿದರೆ ಶೇ.23ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಗುಪ್ತಚರ ಸಂಸ್ಥೆಯಾದ ಟ್ಯಾಕ್ಸನ್ ಬಿಡುಗಡೆ ಮಾಡಿದ ವರದಿಯು ಹಲವು ಅಂಶಗಳು ಬಹಿರಂಗವಾಗಿದೆ. ದೊಡ್ಡ ಮೊತ್ತದ ಹೂಡಿಕೆಗಳಲ್ಲಿ ಭಾರೀ ಇಳಿಕೆಯಾಗಿದೆ. ಅಲ್ಲದೇ ದೊಡ್ಡ ಮಟ್ಟದ ಹೂಡಿಕೆಗಳು ಇಳಿಕೆಯಾಗುತ್ತಿವೆ. ಆದಾಗ್ಯೂ, ಈ ಅವಧಿಯಲ್ಲಿ ಆರಂಭಿಕ ಹಂತದ ಹೂಡಿಕೆಯು $1.1 ಬಿಲಿಯನ್ (ಸುಮಾರು ರೂ.9,166 ಕೋಟಿ) ತಲುಪಿದೆ ಎಂದು ವರದಿಯು ಉಲ್ಲೇಖಿಸಿದೆ.
ಹೌದು ಬೆಂಗಳೂರಿನಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಗೆ ಹೂಡಿಕೆ ಇಳಿಕೆಯಾಗುತ್ತಿದೆ. ಕೆಲವೊಂದು ಉದ್ಯಮಗಳು ಬೆಂಗಳೂರು ತೊರೆದು ಹೋಗುತ್ತಿವೆ ಎನ್ನುವ ಮಾತು ಕೇಳಿ ಬಂದಿದ್ದು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಸರ್ಕಾರವು ಬೆಂಗಳೂರಿನಿಂದ ಯಾವುದೇ ಕಂಪನಿಗಳು ಹೊರಗೆ ಹೋಗಿಲ್ಲ ಎಂದು ಹೇಳಿತ್ತು. ಆದರೆ ಇದೀಗ ಹೂಡಿಕೆ ಪ್ರಮಾಣ ಇಳಿಕೆಯಾಗಿರುವುದು ವರದಿಯಾಗಿದೆ.
ಸರ್ಕಾರದ ನಿರ್ಲಕ್ಷ್ಯಕ್ಕೆ ವಿರೋಧ ಪಕ್ಷಗಳು ಟೀಕೆ
ಇನ್ನು ಕರ್ನಾಟಕದಲ್ಲಿ ಹೂಡಿಕೆ ಇಳಿಕೆಯಾಗಿರುವುದಕ್ಕೆ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ರಾಜಕೀಯ ಕುಚೋದ್ಯಮದಲ್ಲಿ ಭಾರಿ ಆಸಕ್ತಿ ತಂತ್ರಜ್ಞಾನ ನವೋದ್ಯಮದಲ್ಲಿ ನಿರಾಸಕ್ತಿ. ಇದು ನಮ್ಮ ರಾಜ್ಯದ ಐಟಿ-ಬಿಟಿ ಸಚಿವರ ಕಾರ್ಯವೈಖರಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕೆ ಮಾಡಿದ್ದಾರೆ.
ತಮಗೆ ಸಂಬಂಧಪಡದ ವಿಷಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು, ಆರ್ ಎಸ್ಎಸ್ ನಿಷೇಧದ ಹಠ, ಸಿಕ್ಕಸಿಕ್ಕವರ ಮೇಲೆ ರಾಜಕೀಯ ಕುಚೋದ್ಯ - ಇವುಗಳಲ್ಲೇ ಸದಾ ಕಾಲಹರಣ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಮ್ಮ ಕರ್ತವ್ಯದ ಅರಿವೂ ಇದ್ದಂತಿಲ್ಲ, ಆಸಕ್ತಿಯಂತೂ ಮೊದಲೇ ಇಲ್ಲ.
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಾಸಕ್ತಿ, ನಿಷ್ಕ್ರಿಯತೆ ಪರಿಣಾಮವಾಗಿ ಇಂದು ನಮ್ಮ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಹೂಡಿಕೆ 40% ಭಾರಿ ಕುಸಿತ ಕಂಡಿದೆ. ನವೋದ್ಯಮಗಳ ರಾಜಧಾನಿ ಎಂದು ಖ್ಯಾತಿ ಪಡೆದಿದ್ದ ಕರ್ನಾಟಕ ಮತ್ತು ಬೆಂಗಳೂರು ಇಂದು ಅನ್ಯರಾಜ್ಯಗಳ ಮುಂದೆ ತಲೆತಗ್ಗಿಸುವಂತಾಗಿದೆ.
ನಮ್ಮ ನಾಡಿನ ಯುವ ನವೋದ್ಯಮಿಗಳಿಗೆ, ಹೂಡಿಕೆದಾರರಿಗೆ ಅವರ ಭವಿಷ್ಯದ ಬಗ್ಗೆ ಚಿಂತಿಸುವ, ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆ ಬೆಳೆಸುವ ಒಬ್ಬ ಕ್ರಿಯಾಶೀಲ ಐಟಿ ಸಚಿವ ಬೇಕೇ ಹೊರತು ಸದಾ ರಾಜಕೀಯ ಕುಚೋದ್ಯಮದಲ್ಲೇ ಟೈಂ ಪಾಸ್ ಮಾಡುವ Troll ಮಿನಿಸ್ಟರ್ ಅಲ್ಲ. ಒಟ್ಟಿನಲ್ಲಿ ನಮ್ಮ ರಾಜ್ಯಕ್ಕೆ ಹಿಡಿದಿರುವ ಈ ಕರ್ನಾಟಕ ಕಾಂಗ್ರೆಸ್ ಎಂಬ ಗ್ರಹಣ ಬಿಡುವವರೆಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications