Resorts & Homestays: ರೆಸಾರ್ಟ್, ಹೋಂಸ್ಟೇಗಳಿಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ
ವೀಕೆಂಡ್ ಹಾಗೂ ರಜಾದಿನಗಳನ್ನು ಆರಾಮದಾಯವಾಗಿ ಕಳೆಯಲು ಸಿಟಿ ಮಂದಿ ಈಗ ದೂರದ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಿಗೆ ಹೋಗುವುದು ಟ್ರೆಂಡ್ ಆಗಿದೆ. ಇದೇ ಕಾರಣಕ್ಕೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅದರಲ್ಲೂ ದಟ್ಟ ಅರಣ್ಯಗಳ ನಡುವೆ ಇರುವ ರೆಸಾರ್ಟ್, ಹೋಂಸ್ಟೇಗಳನ್ನು ಜನ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ರಾಜ್ಯ ಸರ್ಕಾರವು ಈ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳಿಗೆ ಬಿಗ್‌ಶಾಕ್ ನೀಡಿದೆ.
ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದ ಯಾವುದೇ ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಹೋಂಸ್ಟೇಗಳು ಅಥವಾ ರೆಸಾರ್ಟ್‌ಗೆ ನಮ್ಮ ಸರ್ಕಾರ ಅವಕಾಶ ನೀಡಿಲ್ಲ ಎಂದು ಚಾಮರಾಜನಗರದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಒಂದು ವೇಳೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವುದು, ಹೋಂಸ್ಟೇಗಳು ಅಥವಾ ರೆಸಾರ್ಟ್ ನಡೆಯುತ್ತಿರುವ ಬಗ್ಗೆ ಸ್ಪಷ್ಟ ದೂರು ಬಂದರೆ, ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಪ್ರವಾಸೋದ್ಯಮ, ಅರಣ್ಯ ಭೂಮಿ ಅತಿಕ್ರಮಣವನ್ನು ನಿಯಂತ್ರಿಸುವ ಉದ್ದೇಶದೊಂದಿಗೆ ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ಹೊಸ ರೆಸಾರ್ಟ್, ಹೋಟೆಲ್ ಅಥವಾ ಹೋಂಸ್ಟೇಗಳನ್ನು ಪ್ರಾರಂಭಿಸಲು ರಾಜ್ಯ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಕೆಲ ತಿಂಗಳ ಹಿಂದೆ ಸೂಚಿಸಲಾಗಿತ್ತು.
ಗೆಸ್ಟ್ ಹೌಸ್‌ಗಳಿಗೂ ರೂಲ್ಸ್
ಪ್ರವಾಸೋದ್ಯಮವನ್ನು ನಿಯಂತ್ರಿಸಲು ಹುಲಿ ಮೀಸಲು ಪ್ರದೇಶದೊಳಗಿನ ಅತಿಥಿ ಗೃಹಗಳನ್ನು ಮುಚ್ಚುವ ಬಗ್ಗೆಯೂ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಹುಲಿ ಮೀಸಲು ಪ್ರದೇಶದಲ್ಲಿ ವಾಸ್ತವ್ಯಕ್ಕೆ ಅನುಮತಿ ನೀಡದಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯೂ ಇದೆ. ಬಂಡೀಪುರದ ಬಳಿಕ ನಾಗರಹೊಳೆಯಲ್ಲೂ ಅತಿಥಿ ಗೃಹಗಳಲ್ಲಿ ವಾಸ್ತವ್ಯಕ್ಕಾಗಿ ಬುಕಿಂಗ್ ಮಾಡಲು ಆಯ್ದ ಸ್ಥಳಗಳಲ್ಲಿ ಮಾತ್ರವೇ ಅವಕಾಶ ನೀಡಲಾಗಿದೆ.
ಹೋಟೆಲ್, ರೆಸಾರ್ಟ್‌ಗಳ ಲೈಸೆನ್ಸ್ ನವೀಕರಣಕ್ಕೂ ಅರಣ್ಯ ಇಲಾಖೆಯ ಅನುಮೋದನೆ ಅಗತ್ಯ. ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಇಲಾಖೆಯು ಯಾವುದೇ ಹೊಸ ಅನುಮತಿ ನೀಡದೆ ಇರಲು ಮುಂದಾಗಿದೆ. ಅರಣ್ಯದ ಅಂಚಿನಲ್ಲಿ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳನ್ನು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ದಶಕದಿಂದಲೂ ಕೆಲಸ ನಡೆಯುತ್ತಿದೆ. ಈ ಬಗ್ಗೆ ಅಧಿವೇಶನದಲ್ಲಿ ಕೂಡ ಚರ್ಚೆಯಾಗಿತ್ತು. ರಾಜ್ಯ ಸರ್ಕಾರವು ಅಕ್ರಮ ಹೋಂ ಸ್ಟೇಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳ ನಿಗಾ ಇಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದಾರೆ.
ಸಾವಿರಾರು ಕಿಲೋ ಮೀಟರ್ ಇರುವ ಅರಣ್ಯದಲ್ಲಿ ಸಂಪೂರ್ಣವಾಗಿ ಗಸ್ತು ತೆರಳಲು ಸಾಧ್ಯವಿಲ್ಲ. ಹೀಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಿದೆ. ಅಲ್ಲದೆ ವನ್ಯಜೀವಿಗಳನ್ನು ಮರಳಿ ಕಾಡಿಗೆ ಕಳುಹಿಸಲು ಕಮಾಂಡ್ ಸೆಂಟರ್ ರಚಿಸಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯಾಧಿಕಾರಿಗಳು ಕಚೇರಿಗಳಲ್ಲಿ ಕೂರದೆ ಹೆಚ್ಚು ಸಂಘರ್ಷ ಇರುವ ಗ್ರಾಮಗಳಿಗೆ ತೆರಳಬೇಕು. ಅಲ್ಲಿನ ಸಮಸ್ಯೆ ಪರಿಹರಿಸಬೇಕು, ಅರಣ್ಯಾಧಿಕಾರಿಗಳು ಜನರಿಗೆ ಸ್ಪಂದಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.












Click it and Unblock the Notifications