LPG Cylinder: ಎಲ್‌ಪಿಜಿ ಬಳಕೆದಾರರಿಗೆ ಹೊಸ ಸೇವೆ, ಇನ್ಮುಂದೆ ಈ ಸಮಸ್ಯೆ ಇರಲ್ಲ!
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಭರ್ಜರಿ ಸಿಹಿಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯ (ಪಿಎನ್‌ಜಿಆರ್‌ಬಿ) ಮೂಲಕ ಹೊಸ ಸೇವೆಯನ್ನು ಪರಿಚಯಿಸಲು ಮುಂದಾಗಿದೆ. ಒಂದು ವೇಳೆ ಈ ಕಾರ್ಯರೂಪಕ್ಕೆ ಬಂದರೆ ಎಲ್‌ಪಿಜಿ ಗ್ರಾಹಕರು ನೆಮ್ಮದಿಯಿಂದ ಇರಲಿದ್ದಾರೆ. ಈಗಾಗಲೇ ಮನೆಬಾಗಿಲಿಗೆ ಎಲ್‌ಪಿಜಿ ವಿತರಣೆ ಸೇವೆ ನೀಡುತ್ತಿರುವ ಏಜೆನ್ಸಿಗಳು ಮತ್ತೊಂದು ಹೊಸ ಹೆಜ್ಜೆ ಇಡಲು ಮುಂದಾಗಿವೆ. ಹೀಗಾಗಿ ಯಾವುದೇ ಅಡಚಣೆಯಿಲ್ಲದೆ ದಿನದ 24 ಗಂಟೆಯೂ ಎಲ್‌ಪಿಜಿ ವಿತರಣೆಗೆ ಚಿಂತನೆ ನಡೆಸಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಪ್ರಸ್ತಾಪಿಸಿರುವ ಹೊಸ ಚೌಕಟ್ಟಿನಡಿಯಲ್ಲಿ, ಗ್ರಾಹಕರ ಪ್ರಾಥಮಿಕ ವಿತರಕರು ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಎಲ್‌ಪಿಜಿ ಸಿಲಿಂಡರ್ ವಿತರಿಸಲು ಸಾಧ್ಯವಾಗದಿದ್ದರೆ, ಹತ್ತಿರದ ವಿತರಕರು ತಮ್ಮದೇ ಕಂಪನಿಯ ಹೊರತಾಗಿಯೂ ಸಾರ್ವಜನಿಕ ವಲಯದ ಉದ್ಯಮ ಸೇವಾ ಕಾರ್ಯವಿಧಾನದ ಭಾಗವಾಗಿ ವಿತರಣೆಯನ್ನು ಪೂರ್ಣಗೊಳಿಸಲಿದ್ದಾರೆ.

ಯಾವುದು ಆ ಹೊಸ ಸೇವೆ?
ಈ ಯೋಜನೆಯಡಿಯಲ್ಲಿ ಯಾವುದೇ ವಿತರಕರು 24 ಗಂಟೆಗಳೊಳಗೆ ಸಿಲಿಂಡರ್ ಪೂರೈಸಲು ಸಾಧ್ಯವಾಗದಿದ್ದರೆ, ಹತ್ತಿರದ ಇನ್ನೊಬ್ಬ ವಿತರಕ ಯಾವುದೇ ಕಂಪನಿಯಿಂದ ಆಗಿದ್ದರೂ ಆ ಸಿಲಿಂಡರ್ ಡೆಲಿವರಿ ಮಾಡಲಿದ್ದಾರೆ. ಇದರಿಂದ ಇನ್ನು ಮುಂದೆ ಗ್ರಾಹಕರು ಸಿಲಿಂಡರ್ ಡೆಲಿವರಿಗೆ ಯಾವುದೇ ಒಂದು ಸಂಸ್ಥೆಯ ವಿತರಕರ ಮೇಲೆಯೇ ಅವಲಂಬಿತರಾಗಬೇಕಿಲ್ಲ. ಒಂದು ರಾಷ್ಟ್ರೀಯ ಏಕೀಕೃತ ವಿತರಣಾ ವ್ಯವಸ್ಥೆಯಾದ 'ಎಲ್‌ಪಿಜಿ ಇಂಟರ್-ಆಪರೆಬಲ್ ಸರ್ವೀಸ್ ಡೆಲಿವರಿ ಫ್ರೇಮ್‌ವರ್ಕ್' ಮೂಲಕ ಈ ಸೇವೆ ನೀಡಲು ಮುಂದಾಗಿವೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರು ಎಲ್‌ಪಿಜಿ ಸಿಲಿಂಡರ್ ವಿತರಣೆಗಾಗಿ ಕಂಪನಿಗಳ ನಡುವೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಕ್ರಾಂತಿಕಾರಿ ವಿಧಾನವು ಮೂರು ಪ್ರತ್ಯೇಕ ವಿತರಣಾ ವ್ಯವಸ್ಥೆಯನ್ನ ಒಂದು ಏಕೀಕೃತ ರಾಷ್ಟ್ರೀಯ ಎಲ್‌ಪಿಜಿ ಸೇವಾ ವ್ಯವಸ್ಥೆಯಾಗಿ ಪರಿವರ್ತಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ತಿಳಿಸಿದೆ.
ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿಯು ಕಟ್ಟುನಿಟ್ಟಾದ ಸಮಯದ ಅಡಿಯಲ್ಲಿ 24-ಗಂಟೆಗಳ ವಿತರಣಾ ಖಾತರಿಯನ್ನು ಒದಗಿಸಲಿದೆ. ಇದು ಪ್ರಸ್ತುತ 48-ಗಂಟೆಗಳ ವ್ಯವಸ್ಥೆಯನ್ನ ಬದಲಾಯಿಸಿ 24 ಗಂಟೆಗಳ ನಂತರ ಸ್ವಯಂಚಾಲಿತ ಕ್ರಾಸ್-ಕಂಪನಿ ಸೇವೆ ಸಕ್ರಿಯಗೊಳಿಸಲಿದೆ ಎಂದು ಹೇಳಿದೆ. ಈ ಹೊಸ ವ್ಯವಸ್ಥೆಯು 24 ಗಂಟೆಗಳಲ್ಲಿ ಸಿಲಿಂಡರ್ ವಿತರಣೆಗೆ ಗ್ಯಾರಂಟಿ ನೀಡುತ್ತದೆ.
ಇದರಿಂದ ಎಲ್‌ಪಿಜಿ ಉಪಯೋಗಿಸುವ ಸುಮಾರು 330 ಮಿಲಿಯನ್ ಗ್ರಾಹಕರು ತ್ವರಿತ ಮತ್ತು ಸುಗಮ ಸೇವೆಯನ್ನು ಪಡೆಯಬಹುದು. ಭಾರತದಲ್ಲಿ ಪ್ರಮುಖ ಆಮದು ಮಾರಾಟ ಸಂಸ್ಥೆಗಳಾದ ಇಂಡೇನ್, ಭಾರತ್ ಗ್ಯಾಸ್, ಹೆಚ್‌ಪಿ ಗ್ಯಾಸ್ ಈ ಯೋಜನೆಯಲ್ಲಿ ಭಾಗಿಯಾಗಿವೆ. ಈ ಮೂರರ ಸಹಯೋಗದಲ್ಲಿ ಗ್ರಾಹಕರಿಗೆ ಗ್ಯಾಸ್ ವಿತರಕರು ಸೇವೆ ನೀಡಲಿದ್ದಾರೆ.












Click it and Unblock the Notifications