ಬಿಜೆಪಿಗೆ ಕನ್ನಡಪರ ಸಂಘಟನೆಗಳ ಮೇಲೆ ದಿಢೀರ್ ಪ್ರೀತಿ ಹೆಚ್ಚಾಯ್ತಾ?
ರಾಜ್ಯದಲ್ಲಿ ಕಾವೇರಿ ಬಂದ್ ಕಾವು ಜೋರಾಗಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟ ತೀವ್ರಗೊಳಿಸಿದ್ದಾರೆ. ಅದ್ರಲ್ಲೂ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬಿಜೆಪಿ ನಾಯಕರು ನೇರ ಬೆಂಬಲ ಘೋಷಿಸಿದ್ದಾರೆ. ಆದರೆ ಪ್ರಶ್ನೆ ಇದಲ್ಲ, ಸ್ವತಃ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಬಗ್ಗೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದರು. ಆದರೆ ಈಗ ದಿಢೀರ್ ಪ್ರೀತಿ ಹೆಚ್ಚಾಯ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.
ಅದು 2020ರ ನವೆಂಬರ್ ತಿಂಗಳು, ಆಗ ಬಿಜೆಪಿ ಸರ್ಕಾರ 'ಮರಾಠ ಅಭಿವೃದ್ಧಿ ನಿಗಮ'ಕ್ಕೆ ಭರ್ಜರಿ ಕೊಡುಗೆ ನೀಡಲು ಮುಂದಾಗಿತ್ತು. ಅಂದು ಬಿಜೆಪಿ ಸರ್ಕಾರದಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ನಿಗಮಕ್ಕೆ ಭಾರಿ ಅನುದಾನ ಘೋಷಿಸಿದ್ದರು. ಆದರೆ ಇದನ್ನು ಖಂಡಿಸಿ ರೊಚ್ಚಿಗೆದ್ದ ಕನ್ನಡಪರ ಸಂಘಟನೆಗಳ ಕಾರ್ಯರ್ತರು, ದೊಡ್ಡ ಹೋರಾಟ ಆರಂಭಿಸಿದ್ದರು. ಆಗಲೇ ನೋಡಿ ವಿವಾದ ಹುಟ್ಟಿಕೊಂಡಿದ್ದು, ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡಪರ ಸಂಘಟನೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಹೋರಾಟಗಾರರನ್ನು ಬೈದಿದ್ದ ಬಿಜೆಪಿ ಶಾಸಕ?
'ಮರಾಠ ಅಭಿವೃದ್ಧಿ ನಿಗಮ'ದ ಬಗ್ಗೆ ಅಂದಿನ ಬಿಜೆಪಿ ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಪರ ಹೋರಾಟಗಾರರು ಪ್ರತಿಭಟನೆ ಮಾಡುವಾಗಲೇ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕನ್ನಡಪರ ಸಂಘಟನೆ ಕಾರ್ಯಕರ್ತರನ್ನ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಆವತ್ತು ಬೈದು, ಈವತ್ತು ಮತ್ತೆ ಬಿಜೆಪಿ ಕನ್ನಡಪರ ಹೋರಾಟಗಾರರನ್ನು ಬೆಂಬಲಿಸುತ್ತಿದೆಯಾ? ಎನ್ನುವ ಪ್ರಶ್ನೆ ಎದುರಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಕೂಡ ಜೋರಾಗಿದೆ.
ಕನ್ನಡಪರ ಹೋರಾಟಗಾರರ ಮೇಲೆ ಕೇಸ್?
ಇದಿಷ್ಟೇ ಅಲ್ಲದೆ ಆಗ ಕನ್ನಡಪರ ಹೋರಾಟಗಾರರ ಮೇಲೆ ಸುಖಾಸುಮ್ಮನೆ ಕೇಸ್ ಹಾಕಿ, ಟಾರ್ಗೆಟ್ ಮಾಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿತ್ತು. ಇದು ಕನ್ನಡಿಗರ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಹೀಗೆ ಒಂದು ಕಾಲದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕನ್ನಡಪರ ಸಂಘಟನೆಗಳ ಕಾರ್ಯಕರ್ತರನ್ನು ನಿಂದಿಸಿ, ಈಗ ಅವರ ಹೋರಾಟಕ್ಕೆ ತಮ್ಮ ಬೆಂಬಲ ನೀಡುತ್ತಿರುವುದು ಏಕೆ? ಎಂದು ಬಿಜೆಪಿ ನಾಯಕರನ್ನ ಸೋಷಿಯಲ್ ಮೀಡಿಯಾ ಮಂದಿ ಪ್ರಶ್ನೆ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ಹಿಂದೆ ಬಿಜೆಪಿ ನಾಯಕರು ಕನ್ನಡಪರ ಸಂಘಟನೆಗಳ ಹೋರಾಟಗಾರರ ಬಗ್ಗೆ ನೀಡಿದ್ದ ಹೇಳಿಕೆಗಳು ಕೂಡ ಹೋರಾಟದ ವೇಳೆ ವೈರಲ್ ಆಗುತ್ತಿವೆ.

ಬಿಜೆಪಿ ಸಂಸದರ ವಿರುದ್ಧವೂ ಆಕ್ರೋಶ
ಇನ್ನು ಕರ್ನಾಟಕದಲ್ಲಿ ಕಾವೇರಿ ಕಿಚ್ಚು ಜೋರಾಗಿರುವ ಸಮಯದಲ್ಲೇ ರಾಜಕೀಯ ಕಿತ್ತಾಟ ಕೂಡ ದೊಡ್ಡದಾಗಿದೆ. ಅಲ್ಲದೆ ತಮಿಳುನಾಡು ರಾಜಕೀಯ ನಾಯಕರು ಕಾವೇರಿ ವಿಚಾರ ಬಂದರೆ ಒಗ್ಗಟ್ಟು ಪ್ರದರ್ಶಿಸುವ ರೀತಿ ನೋಡಿ ಕಲಿಯಿರಿ ಎಂದು ಕನ್ನಡಿಗರು ಬುದ್ಧಿಯನ್ನ ಕೂಡ ಹೇಳುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧ ಕೂಡ ಕನ್ನಡಿಗರು ಕೋಪಗೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ. ಇಷ್ಟು ಸಂಸದರು ಒಂದೇ ಪಕ್ಷದಿಂದ ಆಯ್ಕೆಯಾಗಿ ಹೋಗಿದ್ದು, ಕೇಂದ್ರದಲ್ಲಿ ಅಧಿಕಾರ ಇದ್ದರೂ ಕಾವೇರಿಯ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ವಾ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಜನ.
ಒಟ್ನಲ್ಲಿ ಕನ್ನಡ ನೆಲ, ಜಲದ ವಿಚಾರ ಬಂದಾಗ ಕರ್ನಾಟಕದ ರಾಜಕೀಯ ಪಕ್ಷಗಳಲ್ಲೂ ರಾಜಕೀಯ ನಡೆಯುತ್ತೆ ಎಂಬುದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಇದು ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಹೀಗಾಗಿ ರಾಜಕೀಯ ಪಕ್ಷಗಳು ಈಗಲಾದರೂ ಬುದ್ಧಿ ಕಲಿತು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡ್ತವಾ? ಕಾದು ನೋಡಬೇಕು. ಇಲ್ಲ ಈ ರೀತಿ ರಾಜಕೀಯ ಮುಂದುವರಿದರೆ, ಜನರೇ ಮುಂದೆ ಪಾಠ ಕಲಿಸುವುದು ಪಕ್ಕಾ ಎಂಬ ಮಾತು ಕೇಳಿಬರುತ್ತಿದೆ.












Click it and Unblock the Notifications