ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ಪಕ್ಷ ಸೇರಿದ ಯಡಿಯೂರಪ್ಪ ಆಪ್ತ!
ಬೆಂಗಳೂರು, ಮಾರ್ಚ್ 23; ಮಾಜಿ ಸಚಿವ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಪಕ್ಷ ಸ್ಥಾಪನೆ ಮಾಡಿರುವ ಜನಾರ್ದನ ರೆಡ್ಡಿ ಸಂಘಟನೆಗೆ ಒತ್ತು ನೀಡಿದ್ದು, ಪಕ್ಷದ ಯುವ ಘಟಕಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷರು ಈಗ ಬಿಜೆಪಿ ತೊರೆದು ಜನಾರ್ದನ ರೆಡ್ಡಿ ಪಕ್ಷವನ್ನು ಸೇರಿದ್ದಾರೆ.
ಭೀಮಾಶಂಕರ ಪಾಟೀಲ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯುವ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನೇಮಕಾತಿ ಪತ್ರವನ್ನು ನೀಡಿದ್ದಾರೆ. ಆಳಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಭೀಮಾಶಂಕರ ಪಾಟೀಲ್ ಬಿಜೆಪಿ ಬಿಟ್ಟು ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾಗಿದ್ದ ಭೀಮಾಶಂಕರ ಪಾಟೀಲ್ ಕಳೆದ 20 ವರ್ಷಗಳಿಂದ ಸಾಮಾಜಿಕ ಹೋರಾಟ, ಕನ್ನಡಪರ ಹೋರಾಟಗಳ ಮೂಲಕ ಸಾರ್ವಜನಿಕ ಜೀವನದಲ್ಲಿದ್ದಾರೆ. ಕರ್ನಾಟಕ ನವನಿರ್ಮಾಣ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆಗಿದ್ದಾರೆ. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಅವರು ಈಗ ಬಿಜೆಪಿ ತೊರೆದಿದ್ದಾರೆ.

ಬಿಜೆಪಿಯಲ್ಲಿದ್ದಾಗ ಬೆಳಗಾವಿ ಗ್ರಾಮೀಣ, ಚಿಕ್ಕೋಡಿ ಜಿಲ್ಲೆಗಳ ಪ್ರಭಾರಿಗಳಾಗಿ ಮತ್ತು ಗೋವಾ ಚುನಾವಣಾ ಉಸ್ತುವಾರಿಗಳಾಗಿ ಕೆಲಸ ಮಾಡಿದ್ದರು ಭೀಮಾಶಂಕರ ಪಾಟೀಲ್. ಈ ಬಾರಿಯ ಚುನಾವಣೆಗೆ ಆಳಂದ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಟಿಕೆಟ್ ಘೋಷಣೆಗೂ ಮೊದಲೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸ ಪಕ್ಷ ಸ್ಥಾಪನೆ; 2022ರ ಡಿಸೆಂಬರ್ 25ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು. ಅಲ್ಲದೇ ತಾವು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಹೇಳಿದರು. ಕ್ಷೇತ್ರದಲ್ಲಿ ಈಗಾಗಲೇ ಜನಾರ್ದನ ರೆಡ್ಡಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಕನಕಗಿರಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಈಗಾಗಲೇ ಸಿರಗುಪ್ಪಗೆ ಧರೆಪ್ಪ ನಾಯಕ, ಕನಕಗಿರಿಗೆ ಡಾ. ಚಾರುಲ್ ದಾಸರಿ, ನಾಗಠಾಣಾಕ್ಕೆ ಶ್ರೀಕಾಂತ್, ಸಿಂಧನೂರು ಕ್ಷೇತ್ರಕ್ಕೆ ನೆಕ್ಕಂಟಿ ಮಲ್ಲಿಕಾರ್ಜುನ, ಚಿತ್ರದುರ್ಗದ ಹಿರಿಯೂರು ಕ್ಷೇತ್ರಕ್ಕೆ ಮಹೇಶ್ ಮತ್ತು ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ಮೆಹಬೂಬ ಅ ಅರಬ್ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಪ್ರಣಾಳಿಕೆಯಲ್ಲಿ ರೈತರಿಗೆ, ಕೃಷಿಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಖಾತೆಗೆ ಪ್ರತಿ ವರ್ಷ 15 ಸಾವಿರ ರೂ. ಜಮೆ ಮಾಡುವ ಭರವಸೆಯನ್ನು ನೀಡಲಾಗಿದೆ. ಚುನಾವಣೆಗಾಗಿ ಅವರು ಈಗಾಗಲೇ ಪ್ರಚಾರವನ್ನು ನಡೆಸುತ್ತಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಬಳ್ಳಾರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಅದೇ ಕ್ಷೇತ್ರದಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಬಿಜೆಪಿಯ ಮೇಲೆ ಅಸಮಾಧಾನಗೊಂಡು ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಲಿದೆಯೇ? ಎಂದು ಕಾದು ನೋಡಬೇಕು. ಬಿಜೆಪಿ ನಾಯಕರು ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ಅವರ ಜೊತೆ ಮಾತುಕತೆ ನಡೆಸಿಲ್ಲ. ಇಂದು ವೇಳೆ ಚುನಾವಣೋತ್ತರವಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬಿಜೆಪಿ ಜೊತೆ ವಿಲೀನಗೊಳ್ಳಲಿದೆಯೇ? ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.












Click it and Unblock the Notifications