ಅಮಾಯಕರನ್ನು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಿ: ಸಿದ್ದರಾಮಯ್ಯ Vs ಸಿಟಿ ರವಿ
Recommended Video
ಬೆಂಗಳೂರು, ಅಕ್ಟೋಬರ್ 19: ವೀರ್ ಸಾವರ್ಕರ್ ಅವರಿಗೆ 'ಭಾರತ ರತ್ನ' ನೀಡುವ ಕುರಿತಾದ ಮಹಾರಾಷ್ಟ್ರ ಚುನಾವಣೆಯಲ್ಲಿನ ಬಿಜೆಪಿ ಪ್ರಣಾಳಿಕೆಯಲ್ಲಿನ ಘೋಷಣೆ ವಿವಾದ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾವರ್ಕರ್‌ಗೆ ಭಾರತ ರತ್ನ ನೀಡುವುದಾದರೆ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಗೂ ನೀಡಿ ಎನ್ನುವ ಮೂಲಕ ವಿವಾದವನ್ನು ಮತ್ತಷ್ಟು ಜೋರಾಗಿಸಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ರಾಜ್ಯದ ಬಿಜೆಪಿ ಮುಖಂಡರನ್ನು ಕೆರಳಿಸಿದೆ. ಈ ವಾಗ್ವಾದ ಮತ್ತೊಂದು ಹಂತಕ್ಕೆ ತಲುಪುವ ಸೂಚನೆ ನೀಡಿದೆ.
ಭಾರತ ರತ್ನದ ಕುರಿತಂತೆ ಸಿದ್ದರಾಮಯ್ಯ ಮತ್ತು ಸಚಿವ ಸಿಟಿ ರವಿ ನಡುವೆ ಟ್ವಿಟ್ಟರ್‌ನಲ್ಲಿ ಮಾತಿನ ಯುದ್ಧ ನಡೆಯುತ್ತಿದೆ. ಸಾವರ್ಕರ್ ಅವರನ್ನು ಗಾಂಧೀಜಿ ಹತ್ಯೆಯ ಆರೋಪಿ ಎಂದಿದ್ದ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಪದವಿ ಕಳೆದುಕೊಂಡ ಬಳಿಕ ಸಿದ್ದರಾಮಯ್ಯ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬೇಕು ಎಂದಿರುವ ಸಿಟಿ ರವಿ, ನಿಮಗೆ ಇತಿಹಾಸದ ಪ್ರಜ್ಞೆ ಇದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಅದಕ್ಕೆ ಸಿದ್ದರಾಮಯ್ಯ ಕೂಡ ತೀಕ್ಷ್ಣ ತಿರುಗೇಟು ನೀಡಿದ್ದು, ಸಿಟಿ ರವಿ ಅವರ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. ಅಮಾಯಕರನ್ನು ಸಾಯಿಸಿದವರಿಗೆ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ನೀಡಬೇಕು ಎಂದು ಕಾಲೆಳೆದಿದ್ದಾರೆ. ಅದಕ್ಕೆ ಪುನಃ ಪ್ರತಿಕ್ರಿಯಿಸಿರುವ ಸಿಟಿ ರವಿ, ತಮ್ಮ ಅಧಿಕಾರಾವಧಿಯಲ್ಲಿ ಅಧಿಕಾರಿಗಳು ಮತ್ತು ಮುಗ್ಧರು ನಿಗೂಢವಾಗಿ ಸಾವಿಗೀಡಾದಾಗ ರಾಜ್ಯವಾಳುತ್ತಿದ್ದವರು ಏನು ಕುಡಿಯುತ್ತಿದ್ದರೋ ಎಂದು ವ್ಯಂಗ್ಯವಾಡಿದ್ದಾರೆ.

ಸೆಲ್ಯುಲರ್ ಜೈಲು ನೋಡಿ ಬನ್ನಿ
'ಸಿದ್ದರಾಮಯ್ಯ ಅವರೇ, ನೀವು ರಾಷ್ಟ್ರೀಯವಾದಿ ವೀರ್ ಸಾವರ್ಕರ್ ಅವರನ್ನ ಮಹಾತ್ಮಾ ಗಾಂಧಿ ಹತ್ಯೆಯ ಸಂಚುಕೋರ ಎಂದು ಆರೋಪಿಸಿದ್ದೀರಿ. ನೀವು ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಬಳಿಕ ಮಾನಸಿಕ ವಿಕಲರಾಗಿದ್ದೀರಾ? ನಮಗೆ ಇತಿಹಾಸದ ಯಾವುದಾದರೂ ತಿಳಿವಳಿಕೆ ಇದೆಯೇ? ನೀವೇಕೆ ಸೆಲ್ಯುಲರ್ ಜೈಲಿಗೆ ಭೇಟಿ ನೀಡಬಾರದು? ನಿಮ್ಮ ಪ್ರವಾಸದ ವೆಚ್ಚವನ್ನು ನಾನೇ ಭರಿಸುತ್ತೇನೆ' ಎಂದು ಸಿಟಿ ರವಿ, ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಯಾಗಿ ಟಾಂಗ್ ನೀಡಿದ್ದರು.

ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಿಸಬೇಕು
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹತ್ಯೆಯ ಆರೋಪಿಗಳಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಕಾರು ಅಪಘಾತ ನಡೆಸಿ ಅಮಾಯಕರ ಸಾಯಿಸಿದವರಿಗೂ ಕನಿಷ್ಠ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕಪ್ಪಾ! ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಆಳುತ್ತಿದ್ದವರು ಏನು ಕುಡಿಯುತ್ತಿದ್ದರೋ?
ಹಿಂದೂ ವಿರೋಧಿ ಹಾಗೂ ಮಹಾ ಕ್ರೂರಿಯಾಗಿದ್ದ ಟಿಪ್ಪು ಜಯಂತಿ ಆಚರಿಸಿ ಅಮಾಯಕರನ್ನು ಕೊಂದವರಿಗೆ ಒಬ್ಬ ದೇಶಭಕ್ತ ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಿಯಾಗಿ ಕಾಣುವುದು ಸಹಜ. ತಮ್ಮ ಅಧಿಕಾರ ಅವಧಿಯಲ್ಲಿ ಹಲವು ಅಧಿಕಾರಿಗಳು ಮತ್ತು ಮುಗ್ಧರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾಗ ರಾಜ್ಯವನ್ನಾಳುತ್ತಿದ್ದವರು ಏನು ಕುಡಿಯುತ್ತಿದ್ದರೋ? ಎಂದು ಸಿ.ಟಿ ರವಿ ಟೀಕಿದ್ದಾರೆ.

ಅಮಾಯಕರನ್ನು ಸಾಯಿಸುತ್ತಾರೆ
ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ ಎಂದು ಸಿದ್ದರಾಮಯ್ಯ ಟ್ವೀಟ್ ಪ್ರತಿ ವಾಗ್ದಾಳಿ ನಡೆಸಿದ್ದಾರೆ.

ವಿದೇಶದಲ್ಲಿ ಕುಡಿದು ಸತ್ತವರು
ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಕೊಲೆ ಮಾಡಿದವರ ಕುರಿತು ನೀವು ಇಷ್ಟೊಂದು ಮಾತನಾಡುತ್ತಿರುವುದು ನೋಡಿದರೆ ಅವರು ನಿಮ್ಮ ಆಪ್ತ ಬಳಗವೇ ಇರಬೇಕು. ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತ ಮಹಾ ಕ್ರೂರಿಗಳ ಇತಿಹಾಸ ಓದುವ ನಡುವೆ ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ ಎಂದು ಸಿ.ಟಿ ರವಿ, ಸಿದ್ದರಾಮಯ್ಯ ಅವರ ಮಗ ರಾಕೇಶ್ ಸಾವಿನ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ.












Click it and Unblock the Notifications