ಭಗವಾಧ್ವಜ ತೆರವು, ಯಾದಗಿರಿಯಲ್ಲಿ ನಿಷೇಧಾಜ್ಞೆ
ಯಾದಗಿರಿ, ಅ. 7 : ಮೂವತ್ತೈದು ವರ್ಷಗಳಿಂದ ಐತಿಹಾಸಿಕ ಯಾದಗಿರಿ ಕೋಟೆಯ ಮೇಲೆ ನವರಾತ್ರಿಯ ಸಂದರ್ಭದಲ್ಲಿ ಹಾರಿಸಲಾಗುತ್ತಿರುವ ಭಗವಾದ್ವಜವನ್ನು ಪೊಲೀಸರು ತೆಗೆಸಿರುವ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ನಗರದಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಹಿಂದೂಪರ ಸಂಘಟನೆಗಳು ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ಪೊಲೀಸರಿಗೆ ಗಾಯವಾಗಿವೆ. ಅಂಗಡಿಗಳು, ಕಾರು ಮತ್ತು ದ್ವಿಚಕ್ರ ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗು ಲಕ್ಷಣ ಕಾಣುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ಶುರು ಮಾಡಿದ್ದಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ನವರಾತ್ರಿಯುದ್ದಕ್ಕೂ ಕೋಟೆಯ ಮೇಲೆ ಭಗವಾಧ್ವಜ ಹಾರಿಸಲಾಗುತ್ತದೆ. ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದರೆ, ಕೆಲ ಕೋಮಿಗೆ ಸೇರಿದವರು ಕೋಟೆಯ ಮೇಲಿನ ಕೇಸರಿ ಧ್ವಜವನ್ನು ತೆಗೆಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದರು. ಭಾನುವಾರ ರಾತ್ರಿ ಕೋಟೆ ಮೇಲ್ಭಾಗದಲ್ಲಿ ಹಾರಾಡುತ್ತಿದ್ದ ಕೇಸರಿ ಬಾವುಟ ತೆಗೆಸಲಾಗಿತ್ತು.
ಇದರಿಂದ ರೊಚ್ಚಿಗೆದ್ದ ಹಿಂದೂಗಳು ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆ ಎದಿರು ತೀವ್ರತರವಾಗಿ ಪ್ರತಿಭಟನೆಗಿಳಿದರು. ಸುಮಾರು 35ಕ್ಕೂ ಹೆಚ್ಚು ವರ್ಷಗಳಿಂದ ಕೋಟೆ ಮೇಲೆ ಬಾವುಟ ಹಾರಾಡುತ್ತಿದೆ. ಇದುವರೆಗೆ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಅಲ್ಲದೇ ಅದನ್ನು ತೆರವುಗೊಳಿಸುವ ಪರಿಸ್ಥಿತಿಯೂ ಬಂದಿರಲಿಲ್ಲ. ಈಗ ಏಕಾಏಕಿಯಾಗಿ ಈ ರೀತಿ ಬಾವುಟ ತೆಗೆಸಿದ್ದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಕಲ್ಲು ತೂರಿ ಬಂದಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚೆದುರಿಸಲು ಲಘು ಲಾಠಿ ಪ್ರಹಾರ ಮಾಡಬೇಕಾಯಿತು. ಪ್ರತಿಭಟನಾಕಾರರು ಕೆಲ ಅಂಗಡಿಗಳ ಮೇಲೆ ಕಲ್ಲು ತೂರಿದ್ದಾರೆ. ಕಾರು, ಬೈಕ್ ಜಖಂ ಮಾಡಿದ್ದಾರೆ. ಕಲ್ಲು ತೂರಾಟದ ಘಟನೆಯಲ್ಲಿ ಚೌಧರಿ, ಎಸ್‌ಐ ವಿಠ್ಠಲ್ ವಗ್ಗಿ, ಸರ್ದಾರ್, ಸಂಗಮೇಶ್ ಎಂಬ ಪೋಲಿಸರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯವಾದಿ ಗುರುಸಿದ್ದಪ್ಪ ಕೋರಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಗಲಭೆ ಹಿನ್ನೆಲೆ ಯಾದಗಿರಿ ನಗರದಲ್ಲಿ ಅಕ್ಟೋಬರ್ 9ರವರೆಗೆ ಭಾರತೀಯ ಅಪರಾಧಿ ಪ್ರಕ್ರಿಯಾ ಸಂಹಿತೆ ಕಲಂ 144ರ ಪ್ರಕಾರ ನಿಷೇದಾಜ್ಞೆ ಜಾರಿಗೊಳಿಸಲಾದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಂಶಿಕೃಷ್ಣ ತಿಳಿಸಿದ್ದಾರೆ.











Click it and Unblock the Notifications