ಬೆಂಗಳೂರು:ಉದ್ಘಾಟನೆಗೊಂಡು ವಾರ ಕಳೆದರೂ ಆಕ್ಸಿಬಸ್ ಇನ್ನೂ ರಸ್ತೆಗಿಳಿದಿಲ್ಲ
ಬೆಂಗಳೂರು, ಮೇ 19: ಕೊರೊನಾ ಎರಡನೇ ಅಲೆ ದೇಶಾದ್ಯಂತ ತೀವ್ರವಾಗಿದ್ದು, ಜನರು ಆಮ್ಲಜನಕ ಸಿಗದೆ ಪ್ರಾಣ ಕಳೆದುಕೊಳ್ಳುವ ಹೀನಾಯ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಮಯದಲ್ಲಿ ಆಕ್ಸಿಬಸ್ ಸೇವೆಯನ್ನು ಕಲ್ಪಿಸಲು ರಾಜ್ಯ ಸರ್ಕಾರ ಮುಂದೆ ಬಂದಿದ್ದರೂ, ಉದ್ಘಾಟನೆಗೊಂಡು ವಾರ ಕಳೆದರೂ ಇನ್ನೂ ಆಕ್ಸಿಬಸ್‌ಗಳು ರಸ್ತೆಗಿಳಿದಿಲ್ಲ ಎನ್ನುವುದೇ ವಿಪರ್ಯಾಸ.
ಹಾಗಾದರೆ ಈ ಎಲ್ಲಾ ಯೋಜನೆಗಳು ಉದ್ಘಾಟನೆಗೆ ಮಾತ್ರ ಸೀಮಿತವೇ ಎಂದು ಜನರು ಅಂದುಕೊಳ್ಳುತ್ತಿರುವುದು ಮಾತ್ರ ಸತ್ಯ. ಗಂಭೀರ ಸ್ವರೂಪದ ರೋಗಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ಪಡೆಯಲು ದಾರಿ ಮಾಡಿಕೊಡಿ, 'ಅನಗತ್ಯವಾಗಿ' ಆಸ್ಪತ್ರೆಗಳಲ್ಲಿ ಹೆಚ್ಚು ಕಾಲ ಉಳಿದಿರುವ ಕೋವಿಡ್ ರೋಗಿಗಳು ಮನೆಗೆ ತೆರಳಿ ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು.

ತುರ್ತು ಸಂದರ್ಭಗಳಲ್ಲಿ ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ಮುಖ್ಯಮಂತ್ರಿಗಳು ಆಕ್ಸಿಬಸ್ ಸೇವೆಯನ್ನು ಪ್ರಾರಂಭಿಸಿದ್ದರು.
ಪ್ರತಿ ತಾತ್ಕಾಲಿಕ ಆಕ್ಸಿಬಸ್ 8 ರೋಗಿಗಳಿಗೆ ನೆರವಾಗಲಿದೆ. ಅಂತಹ 20 ಬಸ್ ಗಳನ್ನು ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳ ಬಳಿ ಇರಿಸಲಾಗುವುದು ಅಲ್ಲದೆ ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಬಸ್ ಗಳನ್ನು ಇರಿಸಲಾಗುವುದು ಎಂದು ಹೇಳಿದ್ದರು.
ದೇಶದಲ್ಲಿ ಒಂದೇ ಕೊರೊನಾವೈರಸ್ ಸೋಂಕಿತ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,67,334 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,89,851 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಭಾರತದಲ್ಲಿ ಒಟ್ಟು 2,54,96,330 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,19,86,363 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 2,83,248 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 32,26,719 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪತ್ತೆಗೆ ತಪಾಸಣೆ ವೇಗವನ್ನು ಹೆಚ್ಚಿಸಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 20,08,296 ಜನರ ಮಾದರಿಯನ್ನು ತಪಾಸಣೆಗೊಳಪಡಿಸಲಾಗಿದೆ. ದೇಶದಲ್ಲಿ ಈವರೆಗೂ 32,03,01,177 ಜನರಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.












Click it and Unblock the Notifications