Breaking; 40 ಪರ್ಸೆಂಟ್ ಕಮೀಷನ್: ಕೆಂಪಣ್ಣ ಬಂಧನ, ಜಾಮೀನು
ಬೆಂಗಳೂರು, ಡಿಸೆಂಬರ್ 25; ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿದಂತೆ ಐವರಿಗೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ. ಬೆಂಗಳೂರಿನಲ್ಲಿ ಪೊಲೀಸರು ಅವರನ್ನು ಶನಿವಾರ ಬಂಧಿಸಿದ್ದರು.
ತೋಟಗಾರಿಕೆ ಮತ್ತು ಯೋಜನಾ ಖಾತೆ ಸಚಿವ ಮುನಿರತ್ನ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ. ಕೆಂಪಣ್ಣ ಸೇರಿದಂತೆ 19 ಮಂದಿಗೆ ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಶುಕ್ರವಾರ ಜಾರಿಗೊಳಿಸಿತ್ತು.
ಕೋರ್ಟ್ ಆದೇಶ ಪಾಲನೆ ಮಾಡಿದ್ದ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಶನಿವಾರ ಡಿ. ಕೆಂಪಣ್ಣ, ವಿ. ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪರನ್ನು ಬಂಧಿಸಿದ್ದರು. ಕೋರಮಂಗಲದಲ್ಲಿರುವ ಜಡ್ಜ್ ನಿವಾಸದಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು.

ಗಂಭೀರ ಅಪರಾಧ ಪ್ರಕರಣ ಅಲ್ಲವಾದ್ದರಿಂದ ಜಡ್ಜ್ ಜಾಮೀನು ಮಂಜೂರು ಮಾಡಿದ್ದಾರೆ. ಸೋಮವಾರ ಕೋರ್ಟ್ ಮುಂದೆ ಹಾಜರಾಗುವಂತೆ ಸೂಚನೆಯನ್ನು ಸಹ ನೀಡಿದ್ದಾರೆ. ಶೇ 40ರಷ್ಟು ಕಮಿಷನ್ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ; ಸಚಿವ ಮುನಿರತ್ನ ಯಲ್ಲಿ ತಮ್ಮ ವಿರುದ್ಧ ಶೇ 40 ರಷ್ಟು ಕಮಿಷನ್ ಆರೋಪ ಮಾಡಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿದಂತೆ 19 ಮಂದಿಯ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ನಡೆಸಿದ್ದರು.
ಶುಕ್ರವಾರ ಮತ್ತೆ ಅರ್ಜಿ ವಿಚಾರಣೆಗೆ ಬಂದಾಗ ಕೆಂಪಣ್ಣ ಹಾಗೂ ಇತರೆ ಎಲ್ಲಾ ಆರೋಪಿಗಳು ವಿಚಾರಣೆಗೆ ಗೈರಾಗಿದ್ದರು. ಇದರಿಂದ ಎಲ್ಲಾ 19 ಮಂದಿ ಆರೋಪಿಗಳಿಗೆ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಜ.19ಕ್ಕೆ ಮುಂದೂಡಿತು.
ಕೋರ್ಟ್ ಶುಕ್ರವಾರ ನೀಡಿದ್ದ ಆದೇಶವನ್ನು ಪಾಲನೆ ಮಾಡಿರುವ ವೈಯಾಲಿಕಾವಲ್ ಠಾಣೆ ಪೊಲೀಸರು ಕೆಂಪಣ್ಣ ಬಂಧಿಸಿದ್ದರು. ಇದು ಗಂಭೀರ ಪ್ರಕರಣವಾಗದ ಕಾರಣ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ಸಚಿವ ಮುನಿರತ್ನ ಗುತ್ತಿಗೆದಾರರ ಸಂಘದ ಕೆಂಪಣ್ಣ ಹಾಗೂ ಇತರೆ 18 ಮಂದಿ ಪದಾಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಪ್ರತ್ಯೇಕವಾಗಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.












Click it and Unblock the Notifications