Sadananda Gowda: 5 ವರ್ಷಗಳಲ್ಲಿ ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದ ಸಂಸದ ಇವರೇ!
ಬೆಂಗಳೂರು, ಏಪ್ರಿಲ್ 07: ಭಾರತದಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ. ಈ ಪ್ರಜಾಪ್ರಭುತ್ವದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗಲಿ ಎಂದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಸಂಸತ್ತು ಅಥವಾ ವಿಧಾನಸಭಾಸಭೆ ಕಳುಹಿಸಲಾಗುತ್ತದೆ.
ಆದರೆ ಕೆಲವು ಜನಪ್ರತಿನಿಧಿಗಳು ಅಧಿವೇಶನಲ್ಲಿ ಒಂದೂ ಪ್ರಶ್ನೆ ಕೇಳದೇ ವಾಪಸ್ ಆಗುತ್ತಾರೆ. ಇಂತಹ ಹತ್ತಾರು ಜನಪ್ರತಿನಿಧಿಗಳಿರುತ್ತಾರೆ. ಆದರೆ ಕರ್ನಾಟಕದ ಸಂಸದರಲ್ಲಿ ಸಂಸತ್ತಿನಲ್ಲಿ ಶೂನ್ಯ ಪ್ರಶ್ನೆಗಳಿದ ಸಂಸದರು ಇವರೇ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಬೆಂಗಳೂರು ಉತ್ತರ ಸಂಸದ ಡಿ.ವಿ ಸದಾನಂದ ಗೌಡ ಅವರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಂಸತ್ತಿನಲ್ಲಿ ಒಂದು ಪ್ರಶ್ನೆಯನ್ನು ಸಹ ಎತ್ತಿಲ್ಲ. ಸಂಸತ್ತಿನಲ್ಲಿ ಶೂನ್ಯ ಪ್ರಶ್ನೆ ಎತ್ತಿದ ಸಂಸದ ಡಿವಿ ಸದಾನಂದ ಗೌಡ ಎಂದು ನಾಗರಿಕರ ಗುಂಪು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (Bangalore Political Action Committee) ಬಿಡುಗಡೆ ಮಾಡಿದ ಅಧ್ಯಯನದಿಂದ ತಿಳಿದುಬಂದಿದೆ.
ಡಿ.ವಿ ಸದಾನಂದ ಗೌಡ ಅವರು 15 ಅಧಿವೇಶನಗಳಲ್ಲಿ 63 ಪ್ರತಿಶತ ಹಾಜರಾತಿಯನ್ನೂ ದಾಖಲಿಸಿದ್ದಾರೆ. ಡಿ.ವಿ ಸದಾನಂದ ಗೌಡ ಅವರು ಸಂಸತ್ತಿನಲ್ಲಿ ಒಂದೂ ಪ್ರಶ್ನೆ ಕೇಳದೇ ಇರಲು ಕಾರಣವನ್ನು ಕೂಡ ಅಧ್ಯಯನ ಬಹಿರಂಗ ಪಡಿಸಿದೆ. ಡಿ.ವಿ ಸದಾನಂದ ಗೌಡರು 2019ರ ಮೇ 30ರಿಂದ ಜುಲೈ 07, 2021 ರವರೆಗೆ ಕೇಂದ್ರ ಸಂಪುಟ ಸಚಿವರಾಗಿದ್ದರು. ಹೀಗಾಗಿ ಅವರು ಹಾಜರಾತಿ ನೋಂದಣಿಗೆ ಸಹಿ ಮಾಡಲಿಲ್ಲ ಹಾಗೂ ಪ್ರಶ್ನೆಗಳನ್ನು ಕೇಳಲಿಲ್ಲ ಎಂದು ಅಧ್ಯಯನವು ವಿವರಿಸಿದೆ.
ಬಿಪಿಎಸಿ ತಂಡವು 2019 ರಿಂದ 2024 ರವರೆಗಿನ ಅವಧಿಯಲ್ಲಿ ವಿಶ್ಲೇಷಣೆ ನಡೆಸಿದೆ. ಈ ವರದಿ ಪ್ರಕಾರ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದಾರೆ. ತೇಜಸ್ವಿ ಸೂರ್ಯ ಐದು ವರ್ಷದ ಅವಧಿಯಲ್ಲಿ 382 ಪ್ರಶ್ನೆಗಳನ್ನು ಕೇಳಿದ್ದಾರೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ ಮೋಹನ್ 189 ಪ್ರಶ್ನೆಗಳನ್ನು ಕೇಳಿದ್ದಾರೆ. ಇನ್ನು ಇಬ್ಬರು ಕ್ರಮವಾಗಿ 212 ದಿನಗಳು ಹಾಗೂ 224 ದಿನಗಳು ಅಧಿವೇಶನದಲ್ಲಿ ಭಾಗಿಯಾಗಿದ್ದಾರೆ. ಒಟ್ಟು ಎಲ್ಲಾ ಸಂಸದರ ಸರಾಸರಿ ಹಾಜರಾತಿ ಶೇಕಡಾ 79 ರಷ್ಟಿದ್ದು, ಕರ್ನಾಟಕದ ಸಂಸದರ ಸರಾಸರಿ ಹಾಜರಾತಿ ಶೇಕಡಾ 71 ರಷ್ಟಿದೆ ಎಂದು ನಾಗರಿಕರ ಗುಂಪು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಅಧ್ಯಯನದಲ್ಲಿ ತಿಳಿಸಿದೆ.












Click it and Unblock the Notifications