Bengaluru-Mysuru Expressway : ಬಣಗುಡುತ್ತಿರುವ ಮಂಡ್ಯ, ಹೆದ್ದಾರಿ, ವ್ಯಾಪಾರ ವಹೀವಾಟು ಕುಸಿತ
ಮಂಡ್ಯ, ಜನವರಿ 31: ಉದ್ಯಾನ ನಗರಿ ಬೆಂಗಳೂರಿನಿಂದ ಸಾಂಸ್ಕೃತಿಕ/ಅರಮನೆ ನಗರಿ ಮೈಸೂರಿಗೆ ದಶಪಥ ರಾಷ್ಟ್ರೀಯ ಹೆದ್ದಾರಿ (Express way) ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ. ಇದರಿಂದ ಎಲ್ಲ ವಾಹನಗಳು ಬೈಪಾಸ್‌ನಲ್ಲೇ ಓಡಾಡುತ್ತಿವೆ. ಮಂಡ್ಯ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಸೇರಿದಂತೆ ಕೆಲವು ಪ್ರದೇಶಗಳ ರಸ್ತೆ, ವೃತ್ತ, ಮುಖ್ಯ ರಸ್ತೆಗಳಲ್ಲಿ ಬಿಕೋ ಎನ್ನುವ ಹಾಗೂ ಕೋವಿಡ್ ಲಾಕ್‌ಡೌನ್ ನಂತಹ ಪರಿಸ್ಥಿತಿ ಕಂಡು ಬಂದಿದೆ.
ಇಲ್ಲಿನ ಇಂಡುವಾಳು ಗ್ರಾಮದಿಂದ ಅಮರಾವತಿ ಹೋಟೆಲ್‌ವರೆಗಿನ ಬೈಪಾಸ್‌ನಲ್ಲಿ ಮೂರು ದಿನಗಳಿಂದ ವಾಹನ ಸಂಚಾರ ಆರಂಭವಾಗಿದೆ. ಬಹುತೇಕ ವಾಹನಗಳು ಹೆದ್ದಾರಿ (ಬೈಪಾಸ್)ಯಲ್ಲೇ ಓಡಾಡುತ್ತಿವೆ. ಹೀಗಾಗಿ ಮಂಡ್ಯ ನಗರ ವ್ಯಾಪ್ತಿಯ ಕಲ್ಲಹಳ್ಳಿ ವೃತ್ತ, ಕೋರ್ಟ್ ವೃತ್ತ, ಫ್ಯಾಕ್ಟರಿ ವೃತ್ತಗಳು ಸಂಚಾರ ದಟ್ಟಣೆ ಮುಕ್ತವಾಗಿದ್ದು, ವಾಹನಗಳೇ ಇಲ್ಲದೇ ಬಣಗುಡುತ್ತಿವೆ.
ಮೈಸೂರು-ಬೆಂಗಳೂರು ಎಕ್ಸಪ್ರೆಸ್‌ವೇ ನಲ್ಲಿ ಸಂಚಾರ ಆರಂಭಕ್ಕೂ ಮುನ್ನ ಈ ಬಿಕೋ ಎನ್ನುತ್ತಿರುವ ರಸ್ತೆಗಳು, ವೃತ್ತಗಳಲ್ಲಿ ಶನಿವಾರ ಮತ್ತು ಭಾನುವಾರದಂದು ಓಡಾಡುವುದೇ ಕಷ್ಟ ಎಂಬ ಸ್ಥಿತಿ ಇತ್ತು. ಸಂಜಯ ವೃತ್ತದಲ್ಲಿ ಟ್ರಾಫಿಕ್‌ನಲ್ಲಿ ಸವಾರರು ಸುಮಾರು 10-15 ನಿಮಿಷ ಕಾದು ತೆರಳಬೇಕಿತ್ತು. ಆದರೆ ಇದೀಗ ಎಲ್ಲವು ತದ್ವಿರುದ್ಧವಾಗಿದೆ. ಸಾರಿಗೆ ಸಂಸ್ಥೆಯ ತಡೆರಹಿತ ಬಸ್‌ಗಳು ನಗರದತ್ತ ಬರುವುದು ಕಡಿಮೆಯಾಗಿದ್ದು, ಎಲ್ಲವು ಎಕ್ಸಪ್ರೆಸ್ ವೇ ಮೂಲಕವೇ ಹೋಗುತ್ತಿವೆ. ಮಂಡ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಕೇಳುವ ಬಸ್‌ಗಳೆ ಇಲ್ಲದಾಗಿದೆ. ಐದು ನಿಮಷಕ್ಕೊಂದರಂತೆ ಬರುತ್ತಿದ್ದ ಬಸ್‌ಗಳಿಗೆ ಹೆದ್ದಾರಿಯಲ್ಲಿ ಈಗ 15-20ನಿಮಿಷ ಕಾಯಬೇಕಾದ ಪರಿಸ್ಥಿತಿ ಇದೆ. ರಸ್ತೆ ಬದಿ ವ್ಯಾಪಾರ, ಆರ್ಥಿಕ ಚಟುವಟಿಕೆ ಕಳೆ ಕುಂದಿದೆ.

ಆರ್ಥಿಕ ಹೊಡೆತ ನೀಡಿದ ಬೈಪಾಸ್ ಸಂಚಾರ
ವಿಮಾನ ನಿಲ್ದಾಣದ ಎಲ್ಲ ಫ್ಲೈಬಸ್ ಹಾಗೂ ಎಸಿ ವೋಲ್ವೊ ಬಸ್‌ಗಳು ನಗರದೊಳಕ್ಕೆ ಬರುತ್ತಿಲ್ಲ. ಕೇವಲ ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಮಾತ್ರ ಬೈಪಾಸ್ ಬಿಟ್ಟು ನಗರಕ್ಕೆ ಬಂದು ಹೋಗುತ್ತಿವೆ. ನಗರ ಬಸ್ ನಿಲ್ದಾಣದಲ್ಲಿ ಮೊದಲಿನಂತ ಬಸ್‌ಗಳ ದಟ್ಟಣೆ, ಓಡಾಟ, ಗುಂಪು ಸಂಚಾರ ಇಲ್ಲದಾಗಿದೆ. ಎಲ್ಲ ವಾಹನಗಳು ಸರಾಗವಾಗಿ ಚಲಿಸುತ್ತಿರುವುದು ಕಂಡು ಬಂದಿದೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನೆ ನಂಬಿಕೊಂಡು ಹೋಟೆಲ್ ತೆರೆದಿದ್ದವರಿಗೆ ಈ ಎಕ್ಸಪ್ರೆಸ್ ವೇ ಆರ್ಥಿಕ ಹೊಡೆ ನೀಡಿದೆ. ಹರಿಪ್ರಿಯಾ ಹೋಟೆಲ್, ಗುರುರಾಜ ಕಾಂಟಿನೆಂಟಲ್, ಜ್ಯೋತಿ ಇಂಟರ್‌ನ್ಯಾಷನಲ್ ಹೋಟೆಲ್, ಸುರಭಿ ಹೋಟೆಲ್, ಮಹಾರಾಜ ಹೋಟೆಲ್ ಸೇರಿದಂತೆ ಚಿಕ್ಕ ಮತ್ತು ದೊಡ್ಡ ಹೋಟೆಲ್‌ಗಳ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ.

ವ್ಯಾಪಾರಿಗಳಿಗೆ ಮುಂದೇನು ಎಂಬ ಪ್ರಶ್ನೆ
ಬೆಂಗಳೂರಿನಿಂದ ಮೈಸೂರಿಗೆ, ಇಲ್ಲವೇ ಮೈಸೂರು- ಬೆಂಗಳೂರು ಬರುವವರು ಕಾರು,ಬೈಕ್, ಬಸ್‌ಗಳು ಮಂಡ್ಯದಲ್ಲಿ ನಿಂತು ಬರುತ್ತಿದ್ದವು. ಬಹುತೇಕ ಮಂದಿ ತಿಂಡಿ ತಿನಿಸು ಸೇವಿಸಿ, ಊಟ ಮುಗಿಸಿ ತೆರಳುತ್ತಿದ್ದರು. ಇದೆಲ್ಲವು ಈಗ ಬಹುತೇಕ ಕಡಿಮೆಯಾಗಿದೆ. ಇಲ್ಲಿ ವಿಶೇಷ ಬೆಲ್ಲ, ತಾಜಾ ತರಕಾರಿ, ಬಾಳೆ ಹಣ್ಣು ಖರೀದಿಸಿ ಪ್ರಯಾಣ ಮುಂದುವರಿಸುತ್ತಿದ್ದರು. ಅದೆಲ್ಲವನ್ನು ಎಕ್ಸಪ್ರೆಸ್ ವೇ ಹೆದ್ದಾರಿ ಕಸಿದುಕೊಂಡಿದೆ. ಹೋಟೆಲ್ ವ್ಯಾಪಾರ ಬಹುತೇಕ ಕುಸಿತವಾಗಿದೆ. ಹೀಗೆ ಮುಂದುವರಿದರೆ ಮುಂದೇನ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಹರಿಪ್ರಿಯ ಹೋಟೆಲ್ ಮಾಲೀಕರು ತಿಳಿಸಿದರು.

ಬೈಪಾಸ್ ಸಂಚಾರ: 3 ದಿನದಲ್ಲಿ ಇಷ್ಟು ನಷ್ಟ
ಮಂಡ್ಯ ವ್ಯಾಪ್ತಿಯಲ್ಲಿ ಹೆದ್ದಾರಿ ಸಮೀಪದ ವಿವಿಧ ಬಗೆಯ (ನಾಟಿ ಶೈಲಿ) ಮಾಂಸಾಹಾರ ಹೋಟೆಲ್‌ಗಳಿಗೆ ವಾಹನಸವಾರರು, ಪ್ರಯಾಣಿಕರು, ಪ್ರವಾಸಿಗರು ಭೇಟಿ ನೀಡಿ ರುಚಿ ಸವಿಯುತ್ತಿದ್ದರು. ಎಲ್ಲರೂ ಬೈಪಾಸ್ ಹಿಡಿದೇ ಓಡಾಡುತ್ತಿದ್ದಾರೆ. ವೇಗ ಪ್ರಯಾಣದಲ್ಲಿ ಪ್ರಯಾಣಿಕರಿಗೆ/ಸವಾರರಿಗೆ ಈ ಮಾಂಸಾಹಾರ ಹೋಟೆಲ್‌ಗಳು ನೆನಪಿಗೇ ಬರತ್ತಿಲ್ಲ ಎಂದು ಮತ್ತೊಬ್ಬ ಹೊಟೆಲ್ ಮುಖ್ಯಸ್ಥರು ಅಳಲು ತೋಡಿಕೊಂಡರು. ಕೇವಲ ಎರಡು ಮೂರು ದಿನದಲ್ಲೇ ಇಷ್ಟೊಂದು ನಷ್ಟು ಉಂಟಾಗಿದೆ ಎಂದರು.

ಸಾವಿರಾರು ಉದ್ಯೋಗಗಗಳಿಗೆ ಕುತ್ತು
ಮದ್ದೂರು, ಮಂಡ್ಯ ಹೆದ್ದಾರಿ ಪಕ್ಕದಲ್ಲಿ ಬಹುಕಾಲದಿಂದಲೂ ತಿಂಡಿ ತಿನಿಸು, ಸೊಪ್ಪು, ತರಕಾರಿ, ಎಳನೀರು, ನೀರಿನ ಬಾಟಲ್ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಣ್ಣ ಪುಟ್ಟ ವ್ಯಾಪಾರಿಗಳು ಈಗ ಅತಂತ್ರಾಗಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳು ನಷ್ಟಕ್ಕೀಡಾಗುತ್ತಿದ್ದು, ಸುಮಾರು 10 ಸಾವಿರ ಉದ್ಯೋಗ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದೆಲ್ಲ ನೋಡಿದರೆ ಮಂಡ್ಯ ವ್ಯಾಪ್ತಿಯ ರಿಯಲ್ ಎಸ್ಟೇಟ್, ಬಾಡಿಗೆ ದರಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ.
ವೇಗದ ಎಕ್ಸಪ್ರೆಸ್ ವೇ ಸಂಚಾರದಿಂದ ಈ ಭಾಗದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಬಂಕ್‌ಗಳ ವಹೀವಾಟು ಇಳಿಕೆ ಆಗಿದೆ. ವಾರಂತ್ಯದಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಇದೀಗ ಬಂಕ್‌ಗಳು ವಾಹನಗಳಿಲ್ಲದೇ ಬಣಗುಡುತ್ತಿವೆ.












Click it and Unblock the Notifications