ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
ಬೆಂಗಳೂರು ಅಂದ್ರೆ ಒಂದು ಹೆಮ್ಮೆ, ಬೆಂಗಳೂರು ಅಂದ್ರೆ ಕರ್ನಾಟಕಕ್ಕೆ ಹೆಚ್ಚು ಹಣವನ್ನ ನಿಡುವ ಜಿಲ್ಲೆ. ಕರ್ನಾಟಕ ಮಾತ್ರವಲ್ಲ ಕೇಂದ್ರ ಸರ್ಕಾರಕ್ಕೂ ಬೆಂಗಳೂರು ಲಕ್ಷಾಂತರ ಕೋಟಿ ರೂಪಾಯಿ ಹಣವನ್ನು ತೆರಿಗೆ ರೂಪದಲ್ಲಿ ನೀಡುತ್ತಿದೆ. ಇಷ್ಟೆಲ್ಲಾ ಇದ್ದರೂ ಬೆಂಗಳೂರಿನಲ್ಲಿ ಮಾತ್ರ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರಿನ ನಿವಾಸಿಗಳು ಪರದಾಡಿ ಊರು ಬಿಡುವ ಪರಿಸ್ಥಿತಿಗೆ ತಲುಪಿದ್ದಾರೆ.
ಬೆಂಗಳೂರಲ್ಲಿ ಮಳೆ ಬಂದಾಗ, ಅಯ್ಯೋ ಯಾಕಪ್ಪಾ ಮಳೆ ಬಂತು ಅಂತಾ ಬೈದುಕೊಳ್ಳುತ್ತಿದ್ದ ಜನರಿಗೆ ಈಗ ಸತ್ಯದ ಅರಿವು ಆಗಿದೆ. ಯಾಕಂದ್ರೆ ಮಳೆಯೇ ಇಲ್ಲದೆ ಬೆಂಗಳೂರಿನಲ್ಲಿ ಎಲ್ಲ ಕಡೆ ಬೋರ್‌ವೆಲ್ ಅಂದ್ರೆ ಕೊಳವೆಬಾವಿ ಬತ್ತಿ ಹೋಗಿವೆ. ಹೀಗಿದ್ದಾಗ ಜನರು ಕೂಡ ಹನಿ ಹನಿ ನೀರಿಗೂ ಚಿನ್ನದಷ್ಟು ಬೆಲೆ ಕೊಟ್ಟು ಬದುಕುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಮಳೆ ಕೂಡ ಮಾಯವಾಗಿದೆ. ಮತ್ತೊಂದು ಕಡೆ ಕಾವೇರಿ ನೀರು ಕೂಡ ಈಗ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದೆ. ಪರಿಸ್ಥಿತಿ ಹೀಗಿದ್ದಾಗ ಟ್ಯಾಂಕರ್ ನೀರು ಕೂಡ, ಕೈಗೆ ಸಿಗದಷ್ಟು ಎತ್ತರಕ್ಕೆ ಹೋಗುತ್ತಿದೆ.

ಬೆಂಗಳೂರಲ್ಲಿ ಮಳೆ ಯಾವಾಗ ಬರುತ್ತೆ?
ಬೆಂಗಳೂರಲ್ಲಿ ಮಳೆ ಬರದೇ ಇದ್ದರೆ ಪರಿಸ್ಥಿತಿ ಸರಿ ಮಾಡಲು ಆಗದಷ್ಟು ಹದ್ದು ಮೀರುತ್ತೆ ಎಂಬ ಮಾತನ್ನು ತಜ್ಞರು ಹೇಳುತ್ತಿದ್ದಾರೆ. ಯಾಕಂದ್ರೆ ಈಗಾಗಲೇ ಬೆಂಗಳೂರಿಗೆ ಕುಡಿಯುವ ನೀರನ್ನು ನೀಡುವ ಡ್ಯಾಂಗಳಲ್ಲಿ ಕೂಡ ನೀರಿನ ಮಟ್ಟ ಕುಸಿತ ಕಾಣುತ್ತಿದೆ. ಇದು ಸಾಲದು ಎನ್ನುವಂತೆ ಮತ್ತೊಂದು ಕಡೆ ಅಂತರ್ಜಲ ಕೂಡ ಮಾಯವಾಗಿದೆ. ಬೆಂಗಳೂರಿನ ಬಹುತೇಕ ಕೆರೆಗಳು ಬತ್ತಿ ಹೋಗುತ್ತಿವೆ. ಹೀಗಾಗಿ ಜನರು ಕೂಡ ಚಿಂತೆಯಲ್ಲಿ ಮುಳುಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸ ಇರುವವರು ದಿನಕ್ಕೆ 2 ಅಥವಾ 3 ಬಿಂದಿಗೆ ನೀರಿನಲ್ಲಿ ಜೀವನ ನಡೆಸುವ ಸ್ಥಿತಿ ನಿರ್ಮಾಣ ಆಗಿದೆ.
ಬರ ಘೋಷಿಸಿದೆ ರಾಜ್ಯ ಸರ್ಕಾರ
ಅಂದಹಾಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದ್ದು. ಜಿಲ್ಲೆಯ 5 ತಾಲೂಕುಗಳ ಯಾವುದೇ ಭಾಗದಲ್ಲು ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ್ರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು & ಸಂಬಂಧಪಟ್ಟಿರುವ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು. ಹಾಗೇ ಸಮನ್ವಯದಿಂದ, ಆ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು ಎಂದು ಖಡಕ್ ಆದೇಶ ನೀಡಲಾಗಿದೆ. ಹೀಗಿದ್ದರೂ ಪರಿಸ್ಥಿತಿ ಸುಧಾರಣೆ ಕಾಣುತ್ತಿಲ್ಲ. ಅದರಲ್ಲಿಯು ಟ್ಯಾಂಕರ್ ನೀರು ಬೇಕು ಅಂದರೆ, ಸಾವಿರ ಸಾವಿರ ರೂಪಾಯಿ ಕೊಡಬೇಕಿದೆ. ಇದು ಬಡವರಿಗೆ ಕೈಗೆಟುಕದ ದ್ರಾಕ್ಷಿ ಆಗುತ್ತಿದೆ.

ಒಟ್ನಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ ದೊಡ್ಡ ತಲೆನೋವನ್ನ ತಂದೊಡ್ಡಿದೆ. ಬೆಂಗಳೂರಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಸರಿಯಾಗಿ ಜಾರಿಗೆ ಬಾರದ ಕಾರಣಕ್ಕೆ ಈ ಸಮಸ್ಯೆ ಮತ್ತಷ್ಟು ದೊಡ್ಡದಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಕೂಡ ಮಳೆ ನೀರು ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಯಾಕಂದ್ರೆ ಇನ್ನು ಕೇಲವೇ ದಿನಗಳಲ್ಲಿ, ಮಳೆಯ ಅಬ್ಬರ ಕೂಡ ಶುರುವಾಗಲಿದೆ.












Click it and Unblock the Notifications