Vande Bharat Update; ಬೆಂಗಳೂರು-ಧಾರವಾಡ ರೈಲು ಯಾವಾಗ?

ಬೆಂಗಳೂರು, ಮೇ 30; ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು. ದೇಶದಲ್ಲಿ ಈಗ ಈ ಸೇವೆಗೆ ಭಾರೀ ಬೇಡಿಕೆ ಇದೆ. ಕರ್ನಾಟಕದಲ್ಲಿ ಒಂದೇ ಒಂದು ವಂದೇ ಭಾರತ್ ರೈಲು ಓಡುತ್ತಿದೆ. ಬೆಂಗಳೂರು-ಧಾರವಾಡ-ಹುಬ್ಬಳ್ಳಿ ಮಾರ್ಗಕ್ಕೆ ರೈಲು ಘೋಷಣೆಯಾಗಿದೆ. ಆದರೆ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರೈಲು ಓಡಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ರೈಲು ಸಂಚಾರ ಯಾವಾಗ? ಎಂಬುದು ಎಲ್ಲರ ಪ್ರಶ್ನೆ. ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ತನ್ನ ಮುಖ್ಯ ಕಚೇರಿ ಹೊಂದಿದೆ. ಬೆಂಗಳೂರಿನಿಂದ ಹೊರಡುವ ರೈಲು, ಹುಬ್ಬಳ್ಳಿ ಮೂಲಕ ಧಾರವಾಡಕ್ಕೆ ತಲುಪಬೇಕಿದೆ.

Bengaluru Dharwad Vande Bharat Express May Delayed For Months

ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ ವಂದೇ ಭಾರತ್ ರೈಲು ಸೇವೆ ಆರಂಭವಾಗಲು ಕನಿಷ್ಠ ಎರಡು ತಿಂಗಳು ಕಾಯಬೇಕಿದೆ. ಹಲವಾರು ಕಾರಣಗಳಿಂದಾಗಿ ಮೇ ಅಂತ್ಯದಲ್ಲಿ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಓಡಿಸಲು ಸಾಧ್ಯವಾಗಿಲ್ಲ. ಅಲ್ಲದೇ ಇನ್ನೂ ಪ್ರಾಯೋಗಿಕ ಸಂಚಾರವೂ ನಡೆದಿಲ್ಲ.

ರೈಲು ಸಂಚಾರ ವಿಳಂಬ ಏಕೆ?; ಬೆಂಗಳೂರು-ಧಾರವಾಡ-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಬೆಂಗಳೂರು-ಹುಬ್ಬಳ್ಳಿ ನಡುವಿನ ಜೋಡಿ ಹಳಿಯ ವಿದ್ಯುದೀಕರಣ ಕಾರ್ಯ ಪೂರ್ಣವಾಗಬೇಕು. ಹುಬ್ಬಳ್ಳಿ ಮತ್ತು ಸಂಶಿ ನಡುವಿನ ಜೋಡಿ ಹಳಿ ಮಾರ್ಗದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಕಾರಣದಿಂದಲೂ ರೈಲು ವಿಳಂಬವಾಗಿದೆ.

Bengaluru Dharwad Vande Bharat Express May Delayed For Months

ಬೆಂಗಳೂರು-ಧಾರವಾಡ ನಡುವೆ ಗಂಟೆಗೆ 130 ಕಿ. ಮೀ. ವೇಗದಲ್ಲಿ ರೈಲು ಸಂಚಾರ ನಡೆಸಲು ಹಳಿಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಆದರೆ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಿ ಪ್ರಾಯೋಗಿಕ ಸಂಚಾರ ನಡೆಸಬೇಕು. ಆದರೆ ಪ್ರಾಯೋಗಿಕ ಸಂಚಾರಕ್ಕೆ ಬೋಗಿಗಳು ಲಭ್ಯವಾಗುತ್ತಿಲ್ಲ. ಈ ಎರಡು ಕಾರಣದಿಂದ ರೈಲು ಸಂಚಾರ ಕನಿಷ್ಠ ಎರಡು ತಿಂಗಳು ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಮೈಸೂರು ಮತ್ತು ಪುರಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಚಾಲನೆ ನೀಡಿದರು. ಇದು ಬೆಂಗಳೂರು ಮೂಲಕ ಸಾಗುತ್ತದೆ. ರಾಜ್ಯದಲ್ಲಿ ಸಂಚಾರ ನಡೆಸುತ್ತಿರುವ ಒಂದೇ ಒಂದು ವಂದೇ ಭಾರತ್ ರೈಲು ಇದಾಗಿದೆ.

ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಸೇವೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ರೈಲು ಸಂಚಾರ ನಡೆಸಬಹುದು ಎಂದು ಅಂದಾಜಿಸಲಾಗಿತ್ತು. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವಿನ ರೈಲಿನ ತಾತ್ಕಾಲಿಕ ವೇಳಾಪಟ್ಟಿಯೂ ಸಿದ್ಧಗೊಂಡಿದೆ. ಬೆಂಗಳೂರಿನಿಂದ ಹೊರಡುವ ರೈಲು ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆಗೊಳ್ಳಲಿದೆ ಎಂಬುದು ಸದ್ಯದ ಅಂದಾಜು.

ವಂದೇ ಭಾರತ್ ರೈಲಿನ ಬೋಗಿ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ. 2023ರ ಆಗಸ್ಟ್ ವೇಳಗೆ ದೇಶದಲ್ಲಿ 75 ವಂದೇ ಭಾರತ್ ರೈಲುಗಳನ್ನು ಓಡಿಸುವುದು ಕೇಂದ್ರ ಸರ್ಕಾರದ ಘೋಷಣೆಯಾಗಿದೆ. ಆದ್ದರಿಂದ ವಿವಿಧ ರಾಜ್ಯಗಳ ಬೋಗಿಗಳ ತಯಾರಿಕೆಗೆ ಟೆಂಡರ್ ಪಡೆಯಲಾಗಿದೆ. ಆದ್ದರಿಂದ ಪ್ರಾಯೋಗಿಕ ಸಂಚಾರಕ್ಕೆ ಸಹ ಕರ್ನಾಟಕ್ಕೆ ಬೋಗಿ ಸಿಗುತ್ತಿಲ್ಲ.

ಬೋಗಿಗಳು ಸಿಕ್ಕಿ, ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಬಳಿಕ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ಸಿಗಲಿದೆ. ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ದಿನಾಂಕದಂತೆ ವಂದೇ ಭಾರತ್ ರೈಲು ಸಂಚಾರಕ್ಕೆ ಮುಹೂರ್ತ ನಿಗದಿಯಾಗಬೇಕು. ಅಂದಾಜಿನಂತೆ ಇನ್ನೂ ಎರಡು ತಿಂಗಳು ರೈಲು ಓಡುವುದಿಲ್ಲ ಎಂಬುದು ಅಧಿಕಾರಿಗಳ ಮಾತು.

ಬೆಂಗಳೂರು-ಧಾರವಾಡ ಹೊರತಪಡಿಸಿ ಇನ್ನು ಮೂರು ವಂದೇ ಭಾರತ್ ರೈಲುಗಳು ಕರ್ನಾಟಕಕ್ಕೆ ಸಿಗಲಿವೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಬೆಂಗಳೂರು-ಹೈದರಾಬಾದ್, ಬೆಂಗಳೂರು-ಶಿವಮೊಗ್ಗ ಮತ್ತು ಬೆಂಗಳೂರು-ಮೈಸೂರು ಮಾರ್ಗಗಳು ಸೇರಿವೆ. ಆದರೆ ಇದಕ್ಕೆ ರೈಲ್ವೆ ಸಚಿವಾಲಯದ ಅಂತಿಮ ಒಪ್ಪಿಗೆ ಇನ್ನೂ ಬಾಕಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+