ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಅಧಿವೇಶನದಲ್ಲಿ ಗುರುವಾರದ ಚರ್ಚೆಯ ವಿವರ

By Prasad
|
Google Oneindia Kannada News

ಬೆಳಗಾವಿ, ಜು. 09 : ಬೆಂಗಳೂರಿನಲ್ಲಿ 3750 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ಮೇಲ್ಮನೆಯಲ್ಲಿ ಗುರುವಾರ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಬಿಡಿಎಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸುತ್ತಾ ಬರಲಾಗಿದ್ದು, ಅಂತಹ ಬಡಾವಣೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.

ಈ ಮನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವುದು, ಮನೆಗಳ ತೆರವು ಕಾರ್ಯಾಚರಣೆ ಸೇರಿದಂತೆ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಮುಂದೆ ಇಂತಹ ಬಡವಾಣೆಗಳ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ವಿವರ ನೀಡಿದರು.

Begalavi assembly session : Thursday discussions

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಒಟ್ಟು 68 ಬಡಾವಣೆಗಳ ನಿರ್ಮಾಣಕ್ಕಾಗಿ 39803 ಎಕರೆ 14 ಗುಂಟೆ ಪ್ರದೇಶಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಈ ಪೈಕಿ 22394 ಎಕರೆ 24 ಗುಂಟೆ ಪ್ರದೇಶವನ್ನು ಭೂಸ್ವಾಧೀನ ಮಾಡಿದೆ. ಸದರಿ ಜಮೀನಿನಲ್ಲಿ ಒಟ್ಟು 185,512 ನಿವೇಶನಗಳನ್ನು ನಿರ್ಮಿಸಲಾಗಿದ್ದು, 152,277 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಆನ್‌ಲೈನ್ ಮೂಲಕ ಹಾಲಿನ ಸಬ್ಸಿಡಿ ಹಣ ಪಾವತಿ

ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣವನ್ನು ಮುಂದಿನ ತಿಂಗಳಿಂದ ಆನ್‌ಲೈನ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು ಮೇಲ್ಮನೆಗೆ ತಿಳಿಸಿದರು.

ಸದಸ್ಯ ಜಿ.ಎಸ್.ನ್ಯಾಮಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 2014-15ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ನೀಡಲು 852 ಕೋಟಿ ರೂ. ಪ್ರೋತ್ಸಾಹ ಧನ ನಿಗದಿಪಡಿಸಲಾಗಿದ್ದು, ಇದುವರೆಗೆ 665 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪ್ರೋತ್ಸಾಹ ಧನವನ್ನು ಯಾವುದೇ ವಿಳಂಬವಿಲ್ಲದೆ ಪಾವತಿ ಮಾಡಲಾಗುತ್ತಿದ್ದು, ಹಾಲು ಉತ್ಪಾದಕರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ 94 ಲಕ್ಷ ಮೊತ್ತದ ಖೋವಾ ಪ್ಯಾನ್ ಅಳವಡಿಕೆ ಹಾಗೂ 53 ಲಕ್ಷ ಮೊತ್ತದ ಕ್ಷೀರಭಾಗ್ಯ ಯೋಜನೆಗಾಗಿ ಹಾಲಿನ ಪುಡಿ ಪ್ಯಾಕಿಂಗ್ ಘಟಕ ತೆರೆಯಲು ಪ್ರಸ್ತಾವನೆ ಸಲ್ಲಿಕೆಯಾಗಿದೆ ಹಾಗೂ ವಿಜಯಪುರ ಹಾಗೂ ಬಾಗಲಕೋಟೆ ಮೊಸರು ಸಂಸಕರಣ ಯಂತ್ರ ಅಳವಡಿಕೆ ಹಾಗೂ ವಿಜಯಪುರ ಕಪ್ ಮೊಸರು ತಯಾರಿಕಾ ಘಟಕ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಹಾಗೂ ಪನ್ನೀರ್ ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ ಎಂದು ಸಚಿವರು ಸದಸ್ಯೆ ತಾರಾ ಅನುರಾಧಾ ಹಾಗೂ ಜಯಮಾಲಾ ಅವರ ಪ್ರಶ್ನೆಗೆ ಉತ್ತರಿಸಿದರು.

ರೇಷ್ಮೆ ಮಾರಾಟ ಕೇಂದ್ರಗಳಲ್ಲಿ ಇ-ಹರಾಜು

ರೇಷ್ಮೆ ಬೆಳೆಗಾರರಿಗೆ ಸೂಕ್ತ ಬೆಲೆ ದೊರಕಿಸಿಕೊಡಲು ಹಾಗೂ ಅವರ ಶೋಷಣೆ ತಪ್ಪಿಸಲು ಎಲ್ಲಾ ರೇಷ್ಮೆ ಮಾರಾಟ ಕೇಂದ್ರಗಳಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲ್ಮನೆಗೆ ತಿಳಿಸಿದರು.

ಅವರು ಸದಸ್ಯ ವಿ.ಸೋಮಣ್ಣ ಅವರ ಪರವಾಗಿ ವೈ.ಎಸ್.ನಾರಾಯಣಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಈಗಾಗಲೇ ಕೊಳ್ಳೆಗಾಲದಲ್ಲಿ ಇ-ಹರಾಜು ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವನ್ನು ಎಲ್ಲಾ ಮಾರಾಟ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದರು.

ಸಾರಾಯಿ ಗುತ್ತಿಗೆದಾರರಿಂದ 808 ಕೋಟಿ ರೂ. ರಾಜಸ್ವ ಬಾಕಿ

ಸಾರಾಯಿ ಗುತ್ತಿಗೆದಾರರಿಂದ 1946-47ರಿಂದ 2004-05ರ ಅವಧಿಯವರೆಗೆ 215 ಕೋಟಿ ರೂ ಅಸಲು ಹಾಗೂ ಬಡ್ಡಿ 592 ಕೋಟಿ ಸೇರಿದಂತೆ ಒಟ್ಟು 808 ಕೋಟಿ ರೂ. ರಾಜಸ್ವ ಪಾವತಿ ಬಾಕಿಯಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೇಲ್ಮನೆಯಲ್ಲಿ ಪಟೇಲ್ ಶಿವರಾಮ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2007ರಿಂದ ರಾಜ್ಯದಲ್ಲಿ ಸಾರಾಯಿ ನಿಷೇಧ ಜಾರಿಗೊಳಿಸಲಾಗಿದೆ. 2006-07ನೇ ಸಾಲಿನಲ್ಲಿ ಇದ್ದಂತಹ ಸಾರಾಯಿ ಗುತ್ತಿಗೆದಾರರಿಂದ ಸರ್ಕಾರಕ್ಕೆ ಯಾವುದೇ ರಾಜಸ್ವ ಬಾಕಿಯಿರುವುದಿಲ್ಲ. ರಾಜಿ ಸಂಧಾನದ ಮೂಲಕ ಬಾಕಿ ಹಣವನ್ನು ವಸೂಲು ಮಾಡಲು ನಿರಂತರ ಪ್ರಯತ್ನ ನಡೆಸಲಾಗುತ್ತಿದ್ದು, ಇದುವರೆಗೆ 65 ಕೋಟಿ ರೂ. ವಸೂಲು ಮಾಡಲಾಗಿದೆ. ಬಹುಪಾಲು ಗುತ್ತಿಗೆದಾರರು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದಿರುವುದರಿಂದ ಬಾಕಿ ವಸೂಲಿಗೆ ಕಷ್ಟವಾಗುತ್ತಿದೆ ಎಂದರು.

ಮೂರು ವರ್ಷದಲ್ಲಿ 11 ಸಾವಿರ ಪೊಲೀಸ್ ವಸತಿ ಗೃಹ

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ 11 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗದೆ ಎಂದು ಗೃಹ ಸಚಿವ ಕೆ ಜೆ ಜಾರ್ಜ್ ಅವರು ಮೇಲ್ಮನೆಗೆ ತಿಳಿಸಿದರು.

ಜಯಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ್ಯಾಂತ 37,123 ಪೊಲೀಸ್ ವಸತಿ ಗೃಹಗಳಿವೆ. ರಾಜ್ಯದಲ್ಲಿ 45,588 ಪೊಲೀಸ್ ಕಾನ್ಸಟೇಬಲ್‌ಗಳ ಕಾರ್ಯನಿರ್ವಹಿಸುತ್ತಿದ್ದಾರೆ. 2015-16ನೇ ಸಾಲಿನ ಆಯವ್ಯಯದಲ್ಲಿ ಪೊಲೀಸ್‌ರಿಗೆ ವಸತಿ ಸೌಕರ್ಯ ಒದಗಿಸಲು ರೂ. 276 ಕೋಟಿ ಅನುದಾನ ನಿಗದಿ ಪಡಿಸಿದೆ. ಈಗಾಗಲೇ ರೂ. 92 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

English summary
Begalavi assembly session : Thursday discussions. Chief minister Siddaramaiah speaks about illegal construction residential properties in Bengaluru and action to be taken to clear them. Construction of quarters to police constables, milk subsidy, dues from excise contractors etc were also discussed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X