"ಬಸವರಾಜ ಬೊಮ್ಮಾಯಿ ನಂಬಿಸಿ ಮೋಸ ಮಾಡಿಬಿಟ್ರು!"
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ನಂಬಿಸಿ ಮೋಸ ಮಾಡಿದ್ದಾರೆ ಎಂದು ಶಿಗ್ಗಾಂವಿ ಬಿಜೆಪಿ ಟಿಕೆಟ್ ವಂಚಿತ ಶ್ರೀಕಾಂತ್ ದುಂಡಿಗೌಡರ ಅವರು ಕಣ್ಣೀರು ಹಾಕಿದ್ದಾರೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿಯ ಕಾರ್ಯಕರ್ತರು ಸಹ ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಶಿಗ್ಗಾಂವಿ ಟಿಕೆಟ್ ಆಕಾಂಕ್ಷಿ ಶ್ರೀಕಾಂತ್ ದುಂಡಿಗೌಡರ ಅವರು ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯ ನಿವಾಸದಲ್ಲಿ ಸೋಮವಾರ ನಡೆದ ಬೆಂಬಲಿಗರು ಸಭೆಯಲ್ಲಿ ಅವರು ಮಾತನಾಡಿದರು.

ಬಸವರಾಜ್ ಬೊಮ್ಮಾಯಿ ಅವರು ಕೊಟ್ಟ ಮಾತು ತಪ್ಪಿದ್ದಾರೆ. ಶಿಗ್ಗಾಂವಿ ಉಪ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಅಲ್ಲದೇ ನನಗೆ ಟಿಕೆಟ್ ಸಿಗುವ ವಿಶ್ವಾಸವೂ ಇತ್ತು. ನನಗೆ ಅಲ್ಲದಿದ್ದರೆ ಕಾರ್ಯಕರ್ತರಿಗಾದರೂ ಟಿಕೆಟ್ ಸಿಗುತ್ತೆ ಅಂತ ನಿರೀಕ್ಷೆ ಮಾಡಿದ್ವಿ. ಆದರೆ, ಆ ಎಲ್ಲಾ ನಿರೀಕ್ಷೆಗಳೂ ಹುಸಿಯಾಗಿವೆ ಎಂದಿದ್ದಾರೆ.
ಲೋಕಸಭಾ ಚುನಾವಣೆ ಸಮಯದಲ್ಲಿ ನಾನು ಮಾತನಾಡಿದ್ದೆ. ಬೊಮ್ಮಾಯಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದೆ. ನನ್ನನ್ನು ಸಹೋದರ ಅಂತಿದ್ದರು. ಬಹಳಷ್ಟು ಜನರು ಮಗನ ವಿಷಯ ಪ್ರಸ್ತಾಪ ಮಾಡಿದ್ದರು ಅಂತ ಹೇಳಿದ್ದರು. ನಾನು ನನ್ನ ಮಗನ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದೂ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದರು. ಆದರೆ, ಈಗ ಮಾತು ತಪ್ಪಿದ್ದಾರೆ. ನಿನಗೆ ಟಿಕೆಟ್ ಕೊಡ್ಸತೀನಿ ಅಂತಲೂ ಹೇಳಿದ್ದರು. ಆದರೆ, ಇದೀಗ ಬಸವರಾಜ್ ಬೊಮ್ಮಾಯಿ ಸತ್ಯವನ್ನು ಮಾತನಾಡದೆ ಅವರ ಬುದ್ಧಿ ತೋರಿಸಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಇದೇ 24ಕ್ಕೆ ಬೆಂಬಲಿಗರ ಸಭೆ ಕರೆದು ಮುಂದಿನ ತಿರ್ಮಾನ ಮಾಡುತ್ತೇನೆ. ಕಾರ್ಯಕರ್ತರಿಗೆ ಅವಕಾಶ ಸಿಗುತ್ತೆ ಅನ್ನೋ ಭರವಸೆ ಇತ್ತು ಈಗ ಹುಸಿಯಾಗಿದೆ. ನಾನು ಟಿಕೆಟ್ ವಿಚಾರವಾಗಿ ವರಿಷ್ಠರನ್ನು ಸಹ ಭೇಟಿ ಸಹ ಮಾಡಿದ್ದೇ. ಅದರೆ ನಮ್ಮ ಕಾರ್ಯಕರ್ತರಿಗೆ ನೋವು ಆಗಿದೆ ಎಂದು ಅವರು ಹೇಳಿದ್ದಾರೆ.
ಭರತ್ ಬೊಮ್ಮಾಯಿಗೆ ಟಿಕೆಟ್ ಕಾರ್ಯಕರ್ತರ ಆಕ್ರೋಶ
ಇನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಮಗ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಿರುವುದಕ್ಕೆ ಈಗಾಗಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಶಿಗ್ಗಾಂವಿಯ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಸ್ಪರ್ಧಿಸಿ ಗೆದಿದ್ದರು. ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹೀಗಾಗಿ, ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ತೆರವಾಗಿದೆ. ಅಲ್ಲಿಂದ ಇದೀಗ ಭರತ್ ಬೊಮ್ಮಾಯಿ ಸ್ಪರ್ಧಿಸುತ್ತಿದ್ದಾರೆ.
ಈ ಬೆಳವಣಿಗೆಗೆ ಬಿಜೆಪಿಯಲ್ಲೇ ಅಸಮಾಧಾನ ಮೂಡಿದೆ. ಇನ್ನು ರಾಜ್ಯದ ಮೂರು ಮೂರು ವಿಧಾನಸಭಾ ಕ್ಷೇತ್ರಗಳಾದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಲ್ಲಿ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications