Basavaraj Horatti: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ
ಬೆಂಗಳೂರು, ಮಾರ್ಚ್ 01: ಮಾರ್ಚ್ 3 ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದ ಕುರಿತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್‌ನವರಿಗೆ ಬಹುಮತವಿದ್ದು, ಅವರಿಗೆ ಸ್ವಾತಂತ್ರ್ಯವಿದೆ. ಅವರಿಗೆ ಅಧಿಕಾರ ಇದೆ. ನಾನು ಸಾಮಾನ್ಯ ಶಿಕ್ಷಕನಾಗಿ ಈ ಹುದ್ದೆಗೆ ಬಂದವನು. ಅವರು ಏನಾದರೂ ನೋಟೀಸ್ ಕೊಟ್ಟರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಾತನಾಡಿ, ಈ ಬಾರಿ ವಿಧಾನ ಪರಿಷತ್‌ನಲ್ಲಿ ಹಲವು ವಿಚಾರಗಳ ಕುರಿತು ಚರ್ಚೆಯಾಗುತ್ತವೆ. . ರಾಜ್ಯದಲ್ಲಿ ಮಾದಕವಸ್ತುಗಳಿಗೆ ಮಕ್ಕಳು ಬಲಿಯಾಗುತ್ತಿರುವ ಬಗ್ಗೆ ಮತ್ತು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿಗೆ ಆರಾಮ ಕುರ್ಚಿ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನ ಪರಿಷತ್ನಲ್ಲಿ ಆಸಕ್ತಿಯಿಂದ ಸದಸ್ಯರು ಕೂರುತ್ತಾರೆ. ಮಧ್ಯಾಹ್ನ ಊಟವಾದ ಮೇಲೂ ಸದಸ್ಯರು ಇರುತ್ತಾರೆ. ನಮ್ಮಲ್ಲಿ ಅಂತಹ ಪರಿಸ್ಥಿತಿ ಬಂದಿಲ್ಲ. ಇನ್ನೊಂದು ಸದನದ ಬಗ್ಗೆ ನಾನು ಮಾತಾಡುವುದು ಸೂಕ್ತ ಅಲ್ಲ ಎಂದು ಬಸವರಾಜ ಹೊರಟ್ಟಿ ಅವರು ಹೇಳಿದರು.
ವಿಧಾನಮಂಡಲ ಜಂಟಿ ಸಲಹಾ ಸಮಿತಿ ಸಭೆ ಕರೆಯಲು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ಸಮಿತಿಯ ಸಭೆ ನಡೆಯಲಿದೆ. ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಸ್ತಾವ ಕೊಟ್ಟಿದ್ದಾರೆ. ಆ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸುವ ಬಗ್ಗೆ ಯೋಚನೆ ಬಂದಿದೆ. ಚರ್ಚೆಗಳು ಉತ್ತಮ ಮಟ್ಟದಲ್ಲಿ ತಲುಪುತ್ತಿಲ್ಲ ಎಂಬ ಬೇಸರವೂ ಇದೆ. ನಮ್ಮಲ್ಲಿ ನಡೆಯುವ ಚರ್ಚೆಗಳು ಇನ್ನೂ ಉತ್ತಮ ಮಟ್ಟದಲ್ಲಿ ತಲುಪುತ್ತಿಲ್ಲ. ಕಲಾಪವನ್ನು ಸುಸೂತ್ರವಾಗಿ ನಡೆಸುವ ಬಗ್ಗೆ ವಿಪಕ್ಷದವರ ಜೊತೆಗೂ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.
ಇನ್ನೂ ಕಳೆದ ಬೆಳಗಾವಿ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಎಂಎಲ್ಸಿ ಸಿ.ಟಿ. ರವಿ ನಡುವೆ ನಡೆದ ಘಟನೆ ಈಗಾಗಲೇ ಅಂತ್ಯಗೊಂಡಿದೆ. ಡಿಸೆಂಬರ್ 19 ರಂದೇ ಅದನ್ನು ನಾನು ಅಂತ್ಯಗೊಳಿಸಿದ್ದೇನೆ. ಅದು ಈಗ ಪರಿಷತ್ ನ ಎಥಿಕ್ಸ್ ಸಮಿತಿ ಮುಂದೆ ಇದೆ. ಎಥಿಕ್ಸ್ ಸಮಿತಿ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದ ಅವರು, ಉಪಸಭಾಪತಿ ಎಂಕೆ ಪ್ರಾಣೇಶ್ ವಿಧಾನ ಪರಿಷತ್ವ ಸ್ಥಾನಕ್ಕೆ ಆಯ್ಕೆ ಕುರಿತು ಮರು ಮತ ಎಣಿಕೆ ನಡೆದ ವಿಚಾರವಾಗಿ ಮಾತನಾಡಿದ ಅವರು, ಮತ ಎಣಿಕೆ ನಡೆದಿದೆ. ಈ ವಿಚಾರ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ತೀರ್ಮಾನ ಮಾಡುತ್ತದೆ. ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ ಎಂದು ಹೇಳಿದರು.












Click it and Unblock the Notifications