"Maize Rate: ಮೆಕ್ಕೆಜೋಳ ಖರೀದಿಗೆ ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಡಿ''
ಕರ್ನಾಟಕ ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿಸಲು ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಟ್ಟು ಖರೀದಿಗೆ ಸೂಚನೆ ನೀಡಿದರೆ ಅವರು ಖರೀದಿ ಆರಂಭಿಸುತ್ತಾರೆ. ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಉಳಿಸಲು ನೀವು ಈ ಕೆಲಸ ಮಾಡಬೇಕು. ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಜಿಲ್ಲೆಯ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟದದಿಂದ ನಡೆದ ರೈತರ ಸತ್ಯಾಗ್ರಹ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು. ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಹೋರಾಟ ನಡೆಸಿದ್ದೀರಿ. ಈ ಸರ್ಕಾರ ಚಾಟಿ ಏಟಿಗೆ ಅಷ್ಟೆ ಸ್ಪಂದನೆ ಮಾಡುತ್ತದೆ. ಮನವಿ ಕೊಟ್ಟರೆ ಸಂದಿಸುವುದಿಲ್ಲ.

ಕಳೆದ ವರ್ಷ ಪ್ರವಾಹ ಪರಿಹಾರ ಕೊಟ್ಟಿಲ್ಲ. ಎನ್‌ಡಿಆರ್ ಎಫ್ ನಿಂದ ಬಂದ ಹಣವನ್ನು ಕೊಡಲೇ ಇಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ 6 ಸಾವಿರಕ್ಕೆ 4 ಸಾವಿರ ಸೇರಿಸಿ ಬಿಜೆಪಿ ಕೊಡುತ್ತಿದ್ದ ಯೋಜನೆ ನಿಲ್ಲಿಸಿದರು. ರೈತರ ಮಕ್ಕಳಿಗೆ ವಿದ್ಯಾನಿಧಿ ಸಹ ನಿಲ್ಲಿಸಲಾಯಿತು. ಕಬ್ಬಿನ ಬೆಲೆಗೆ ರೈತರು ಹೋರಾಟ ಮಾಡುವವರೆಗೂ ದರ ನೀಡಲಿಲ್ಲ. ನಾನೇ ಸಿಎಂ ಆಗಿದ್ದಾಗ ಎಸ್ಎಪಿ ಕಾಯ್ದೆ ತಂದಿದ್ದೇವು.
ರೈತರಿಗೆ ಎಷ್ಟು, ಕಾರ್ಖಾನೆಗಳಿಗೆ ಎಷ್ಟು ಪಾಲು ಎಂದು ಸ್ಪಷ್ಟವಾಗಿದೆ. ಅದನ್ನು ನೋಡದೇ ಕೇಂದ್ರದ ಕಡೆಗೆ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ಕೇಂದ್ರ ಸರ್ಕಾರ ದರ ಕಡಿಮೆಯಾದರೆ ಎಂಎಸ್ ಪಿ ಮೂಲಕ ಆಗಿನ ದರವನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಎಂಎಸ್‌ಪಿ ಕಾನೂನಿನಡಿಯಲ್ಲಿ ರಾಜ್ಯ ಸರ್ಕಾರಕ್ಕೂ ಅಧಿಕಾರ ಇದೆ. ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುವ ಕೆಲಸ ಆಗಬಾರದು. ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. 10 ಲಕ್ಷ ಮೆಟ್ರಿಕ್ ಟನ್ ಖರಿದಿಸುವುದಾಗಿ ಆದೇಶ ಮಾಡಿದ್ದಾರೆ. ನೆಪ ಹೇಳದೇ 10 ಲಕ್ಷ ಮೆಟ್ರಿಕ್ ಟನ್ ರೈತರಿಂದ ನೇರವಾಗಿ ಖರೀದಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ
ಪೆಟ್ರೋಲ್‌ಗೆ ಎಥೆನಾಲ್ ಅನ್ನು ಶೇ 20 ರಷ್ಟು ಸೇರಿಸಬೇಕೆನ್ನುವುದು ಕೇಂದ್ರದ ನೀತಿ. ರಾಜ್ಯ ಸರ್ಕಾರಕ್ಕೆ ಎಷ್ಟು ಕಾರ್ಖಾನೆ ತೆರೆಯಬೇಕು ಎನ್ನುವುದು ಗೊತ್ತಿಲ್ಲ. ಕಾರ್ಖಾನೆ ಮಾಲಿಕರ ಪರವಾಗಿ ಮಾತನಾಡುತ್ತಾರೆ. ಏಜೆಂಟರಿಂದ ಖರೀದಿ ಮಾಡುತ್ತಿದ್ದಾರೆ. ಕರ್ನಾಟಕದ 19 ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ಸಾಧ್ಯತೆ ಇದೆ. ಮೆಕ್ಕೆಜೋಳದ ಖರೀದಿ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳುವವರೆಗೂ ವಿಧಾನ ಮಂಡಲದಲ್ಲಿ ಹೋರಾಟ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿಸಿದರು.
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ಈಗಾಗಲೇ ಸಿಎಂಗೆ ಪತ್ರ ಬರೆದಿದ್ದೇನೆ. ಅವರು ಖರೀದಿಸಲು ಆದೇಶ ಮಾಡಿದ್ದಾರೆ. ಆದರೆ, ಯಾವ ಏಜೆನ್ಸಿಯಿಂದ ಖರೀದಿ ಮಾಡುತ್ತಾರೆ ಎಂದು ತಿಳಿಸುತ್ತಿಲ್ಲ. ಮಾರ್ಕೆಟಿಂಗ್ ಫೆಡರೇಷನ್‌ಗೆ ದುಡ್ಡು ಕೊಟ್ಟು ಖರೀದಿಗೆ ಸೂಚನೆ ನೀಡಿದರೆ ಅವರು ಖರೀದಿ ಆರಂಭಿಸುತ್ತಾರೆ. ಯಾರು ಸಿಎಂ ಆಗಿರುತ್ತೀರೋ ಗೊತ್ತಿಲ್ಲ. ನಿಮ್ಮನ್ನು ಕುರ್ಚಿಯಲ್ಲಿ ಕೂಡಿಸಿದ ರೈತರ ಬದುಕು ಸಂಕಷ್ಟದಲ್ಲಿದೆ. ರೈತರ ಉಳಿಸಲು ನೀವು ಈ ಕೆಲಸ ಮಾಡಬೇಕು. ಕುರ್ಚಿ ವ್ಯವಹಾರ ಆ ಮೇಲೆ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.
ಬೆಡ್ತಿ ವರದಾ ಜೋಡಣೆ ಸಕಾರಾತ್ಮಕ ಸ್ಪಂದನೆ
ಬೆಡ್ತಿ ಮತ್ತು ವರದಾ ನದಿ ಜೋಡಣೆ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಕೇಂದ್ರ ಸರ್ಕಾರ ಸಹ ಆಸಕ್ತಿ ತೆಗೆದುಕೊಂಡು ಡಿಪಿಆರ್ ಮಾಡಲು ಅನುಮತಿ ನೀಡಿದೆ. ರಾಜ್ಯ ಸರ್ಕಾರ ಡಿಪಿಆರ್ ಸಿದ್ಧತೆಗೆ ಕ್ರಮ ಕೈಗೊಳ್ಳುತ್ತಿದೆ. ಡಿಪಿಆರ್ ಕೇಂದ್ರಕ್ಕೆ ಹೋದ ತಕ್ಷಣ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ. ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯಾರೋ ನಾಲ್ಕು ಜನ ಬಂದು ಮನವಿ ಕೊಟ್ಟರೆ ಸಿಎಂ ಸ್ಪಂದಿಸಬಾರದು. ಈ ರಾಜ್ಯದ ನೀರಿನ ಸಂಪತ್ತು ಎಲ್ಲರಿಗೂ ಸೇರಿದೆ. ತೊಂದರೆ ಆಗದಂತೆ, ಯಾವ ಪ್ರದೇಶವು ಮುಳುಗಡೆ ಆಗದಂತೆ ಯೋಜನೆ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications