ಬಿಜೆಪಿಗೆ ಮತ ಕೊಡುವವರು ರಾಕ್ಷಸರು ಎಂದ ಸುರ್ಜೇವಾಲಾ: ಮಾಜಿ ಸಿಎಂ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 16: ಬಿಜೆಪಿಗೆ ಮತ ಕೊಡುವವರು ರಾಕ್ಷಸರು ಎಂಬ ಸುರ್ಜೇವಾಲಾರ ಹೇಳಿಕೆಯನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಂಡಿಸಿದ್ದಾರೆ. ದೇಶದ ನಾಗರಿಕರಿಗೆ ಮಾಡಿದ ಈ ಅವಮಾನವನ್ನು ಪ್ರತಿಯೊಬ್ಬ ನಾಗರಿಕರೂ ಖಂಡಿಸಬೇಕು. ಕಾಂಗ್ರೆಸ್ ಏನು ಸ್ವಚ್ಛವಾಗಿ ತೊಳೆದ ಮುತ್ತೇ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಲ್ಲಿ ಎಲ್ಲರೂ ಹರಿಶ್ಚಂದ್ರರೇ ಇದ್ದಾರಾ? 75 ವರ್ಷದ ಟ್ರ್ಯಾಕ್ ರೆಕಾರ್ಡ್ ಪರಿಶೀಲಿಸಿದರೆ ಅತ್ಯಂತ ಭ್ರಷ್ಟ, ಜನವಿರೋಧಿ ಸರಕಾರಗಳನ್ನು ನಾವು ನೋಡಿದ್ದೇವೆ. ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿನಲ್ಲಿದ್ದಾರೆ? ಎಷ್ಟು ಕೇಸುಗಳಿವೆ? ಎಂದು ಕಾಂಗ್ರೆಸ್ ನಾಯಕರ ವಿರುದ್ದ ಪ್ರಶ್ನೆ ಹಾಕಿದ ಅವರು, ಇವರಿಗೆ ನಾಚಿಕೆ ಆಗಬೇಕು. ಇದು ಅಮಾನವೀಯ, ಅಸಾಂವಿಧಾನಿಕ ಮತ್ತು ಅಕ್ಷಮ್ಯ ಅಪರಾಧ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಅಧಿಕಾರ ಅವಧಿಯ ಕಾಮಗಾರಿಗಳ ತನಿಖೆ ಮಾಡುವುದಾಗಿ ಹೇಳಿ ಮೂರು ತಿಂಗಳಾಗಿದೆ. ಹಲವು ವರದಿಗಳು ಬಂದಿದ್ದು, ಅದರಲ್ಲಿ ಏನೂ ಇಲ್ಲವೆಂದು ಗೊತ್ತಾಗಿ ಪುನರ್ ತನಿಖೆ ಮಾಡುತ್ತಿದ್ದಾರೆ. ರಾಜಕೀಯಪ್ರೇರಿತ ತನಿಖೆಗಳು ನಡೆಯುತ್ತಿವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲಿ. ತನಿಖೆ ಹೆಸರಿನಲ್ಲಿ ತಿಂಗಳುಗಟ್ಲೆ ಬಾರ್ಗೇನ್ ಮಾಡಲು ಉಪಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.
ನಮ್ಮ ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕೇವಲ ರಾಜಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ. ಇವತ್ತಿನ ಕಾಲಘಟ್ಟಕ್ಕೆ ಅನುಗುಣವಾಗಿ ನೂತನ ಶಿಕ್ಷಣ ನೀತಿಯನ್ನು (ಎನ್‍ಇಪಿ) ರೂಪಿಸಲಾಗಿದೆ. ಎನ್‍ಇಪಿ ಕರಡಿಗೆ ಸಿದ್ದರಾಮಯ್ಯನವರ 2013-18ರ ಅವಧಿಯ ಸರಕಾರ ಒಪ್ಪಿಗೆ ಕೊಟ್ಟಿತ್ತು. ಅದರ ನೇತೃತ್ವವನ್ನು ಕಸ್ತೂರಿರಂಗನ್ ಅವರು ವಹಿಸಿದ್ದರು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಕಸ್ತೂರಿರಂಗನ್ ಅವರೇ ಇಡೀ ದೇಶದ ಎನ್‍ಇಪಿ ಮಾಡಿದ್ದಾರೆ ಎಂದು ಹೇಳಿದರು.
ಇನ್ನೂ ಇದು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ. ಇಡೀ ದೇಶದಲ್ಲಿ ಇರುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಪೈಪೋಟಿ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳ ದೊಡ್ಡ ಹಿನ್ನಡೆ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಕಾಮಾಲೆ ಕಣ್ಣಿನಿಂದ ನೋಡದೆ ಮಕ್ಕಳ ಉಜ್ವಲ ಭವಿಷ್ಯವನ್ನು ನೋಡಬೇಕು. ಈ ವಿಚಾರವನ್ನು ಪುನರ್ ವಿಮರ್ಶೆ ಮಾಡಬೇಕು. ಇಲ್ಲವಾದರೆ ಪಾಲಕರು, ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications