ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಯತ್ನಾಳ್ 'ಶುಭಸುದ್ಧಿ' ಪೋಸ್ಟರ್; ಭಾರೀ ವೈರಲ್
Basangouda Patil Yatnal: ಹಿಂದೂ ಫೈಯರ್ ಬ್ರಾಂಡ್ ಅಂತಲೇ ಹೆಸರುವಾಸಿ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಅವರ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿನ ಪೋಸ್ಟರ್‌ವೊಂದು ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಹಾಗಾದ್ರೆ ಅದರಲ್ಲಿ ಏನಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಿಜಯಪುರದ ಬಿಜೆಪಿ ಉಚ್ಚಾಟಿತ ಶಾಸಕ ಬಸಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೀಘ್ರದಲ್ಲೇ ರಾಜ್ಯದ ಜನತೆಗೆ ಶುಭ ಸುದ್ದಿ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಿಮ್ಮ ಫೈರ್ ಬ್ರಾಂಡ್ ಅಂತಲೂ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಇದೀಗ ಭಾರೀ ಕುತೂಹಲ ಹುಟ್ಟುಹಾಕಿದೆ.

ರಾಜ್ಯ ಬಿಜೆಪಿಯಲ್ಲಿ ಹಲವು ಬಲದಾವಣೆ ಆಗುವ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಬದಲಾವಣೆ ವಿಚಾರ ಸೌಂಡ್ ಮಾಡುತ್ತಿದ್ದು, ಅವರ ಸ್ಥಾನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಅವರನ್ನು ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈ ನಡುವೆಯೇ ಯತ್ನಾಳ್ ಅವರ 'ಶೀಘ್ರದಲ್ಲೇ ರಾಜ್ಯದ ಜನತೆಗೆ ಶುಭಸುದ್ದಿ' ಎಂಬ ಪೋಸ್ಟರ್ ವೈರಲ್ ಆಗಿದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನು ಗಮನಿಸಿದರೆ, ಈಗಾಗಲೇ ಪಕ್ಷದಿಂದ ಉಚ್ಚಾಟನೆ ಆಗಿರುವ ಯತ್ನಾಳ್, ಮತ್ತೆ ಬಿಜೆಪಿಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ, ಮೊದಲಿನಿಂದಲೂ ಸಹ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೊಳಿಯಬೇಕು ಎಂದು ಯತ್ನಾಳ್ & ಟೀಂ ಪಟ್ಟು ಹಿಡಿದು ಕುಳಿತಿತ್ತು. ಆದ್ದರಿಂದ ಈ ಪೋಸ್ಟರ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದು ಹೇಳಲಾಗುತ್ತಿದೆ.
ಮೊದಲಿನಿಂದಲೂ ಸಹ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಯತ್ನಾಳ್ ಕೆಂಡಕಾರುತ್ತಲಿದ್ದಾರೆ. ಯತ್ನಾಳ್ ಈಗಾಗಲೇ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟಿತಗೊಂಡಿದ್ದಾರೆ. ಇದಕ್ಕೂ ಮುನ್ನ ಈ ಹಿಂದೆ ಎರಡು ಬಾರಿ ಪಕ್ಷದ ಉಚ್ಛಾಟನೆ ಶಿಕ್ಷೆಗೆ ಗುರಿ ಆಗಿದ್ದರು.

2009ರಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಮಾನತು ಆಗಿದ್ದರು. ಯಡಿಯೂರಪ್ಪ, ಶೋಬಾ ಕರಂದ್ಲಾಜೆ ಸದಾನಂದಗೌಡ ವಿರುದ್ದ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತ್ತು ಆಗಿದ್ದರು. ಮತ್ತೆ 2014ರಲ್ಲಿ ಅಮಾನತ್ತು ಶಿಕ್ಷೆ ರದ್ದುಪಡಿಸಿ ಅವರನ್ನು ಪಕ್ಷಕ್ಕೆ ಕರೆ ತರಲಾಗಿತ್ತು.
2014ರ ಲೋಕಸಭಾ ಚುನಾವಣೆ ನಂತರ ಪರಿಷತ್ ಚುನಾವಣೆಗೆ ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನೆಲೆ ರೊಚ್ಚಿಗೆದ್ದ ಯತ್ನಾಳ್ 2016ರಲ್ಲಿ ಬಂಡಾಯ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮತ್ತೇ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಉಚ್ಚಾಟನೆಯಾಗಿದ್ದರು. 2018ರಲ್ಲಿ ಕೇಂದ್ರದ ವರಿಷ್ಠರು ಹಾಗೂ ಯಡಿಯೂರಪ್ಪ ಅಮಾನತ್ತು ಶಿಕ್ಷೆ ರದ್ದುಪಡಿಸಿ ವಾಪಸ್ ಕರೆಸಲಾಗಿತ್ತು. ಆದರೆ, ಮತ್ತೆ ವಿಜಯೇಂದ್ರ ವಿರುದ್ಧ ಕೆಂಡಕಾರುತ್ತಿದ್ದ ಹಿನ್ನೆಲೆ ಅವರನ್ನು ಮತ್ತೆ ಅಮಾನತ್ತುಗೊಳಿಸಲಾಗಿದ್ದು, ಈ ನಡುವೆಯೇ ಇದೀಗ ಅವರ ಶುಭಸಂಕೇತದ ಪೋಸ್ಟರ್ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications