ದೆಹಲಿಯಿಂದಲೇ ವಿಜಯೇಂದ್ರಗೆ ಮಹತ್ವದ ಸಂದೇಶ ರವಾನಿಸಿದ ಯತ್ನಾಳ್
ಬಿಜೆಪಿಯಲ್ಲಿ ಕಿಡಿ ಹೊತ್ತಿಸಿರುವ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ದೆಹಲಿ ಅಂಗಳ ತಲುಪಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಣವು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ವಿಜಯೇಂದ್ರ ವಿರುದ್ಧ ರಣತಂತ್ರ ಹೆಣೆಯುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯತ್ನಾಳ್ ಅವರು ಬಿಎಸ್ ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸದ್ಯ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬದ ಪರ ಯಾರೂ ಇಲ್ಲ. ವಿಜಯೇಂದ್ರ ದುಡ್ಡಿನ ಮದದಿಂದ ಮಾತನಾಡುತ್ತಾನೆ. ವಿಜಯೇಂದ್ರ ಬಳಿ ಹಣ ಇರಬಹುದು, ಆದ್ರೆ ಗುಣವಿಲ್ಲ. ಹಲ್ಕಾ ಕೆಲಸಗಳನ್ನು ಮಾಡಿರುವ ಆತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯೋಗ್ಯ ಅಲ್ಲ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ಬಿಜೆಪಿಯ ಒಳ್ಳೆಯ ನಾಯಕರನ್ನು ನಿರಂತರವಾಗಿ ತುಳಿಯುತ್ತಾ ಬಂದರು. ನನ್ನನ್ನೂ ತುಳಿಯುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ವಿಜಯೇಂದ್ರ ಕೂಡ ಅದೇ ಕೆಲಸ ಮಾಡುತ್ತಿದ್ದಾನೆ. ಬಿಎಸ್ ಯಡಿಯೂರಪ್ಪ ಪರ ರಾಜ್ಯದಲ್ಲಿ ವೀರಶೈವ-ಲಿಂಗಾಯತರು ಯಾರೂ ಇಲ್ಲ. ಅವರದ್ದು ಮುಗಿದು ಹೋದ ಅಧ್ಯಾಯ ಎಂದೂ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಯಡಿಯೂರಪ್ಪ ಪರ ಲಿಂಗಾಯತರು ಇಲ್ಲ. ಯಡಿಯೂರಪ್ಪ ಮೇಲೆ ಇಟ್ಟಿದ್ದ ಗೌರವವನ್ನ ಅವರು ಉಳಿಸಿಕೊಂಡಿಲ್ಲ. ಅವರನ್ನೇ ಜೈಲಿಗೆ ಕಳಿಸಿದ್ದ ಪುತ್ರ ವಿಜಯೇಂದ್ರನನ್ನ ಮತ್ತೊಮ್ಮೆ ಅಧ್ಯಕ್ಷರನ್ನಾಗಿ ಮಾಡಲು ಹೊರಟಿದ್ದಾರೆ. ಇದಕ್ಕೆ ನಮ್ಮೆಲ್ಲರ ವಿರೋಧವಿದೆ. ಈಗ ವಿಜಯೇಂದ್ರನ ಪರವೂ ಲಿಂಗಾಯತರಿಲ್ಲ. ಯಾರೋ ಒಂದಿಬ್ಬರು ಪೇಮೆಂಟ್ ಸ್ವಾಮಿಗಳು ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರನ ಬಂಡವಾಳ ಬಿಚ್ಚಿಡುವುದೇನಿಲ್ಲ, ಅದೆಲ್ಲವೂ ಓಪನ್ ಬಂಡವಾಳ, ಅವರಪ್ಪನ ನಕಲಿ ಸಹಿ ಮಾಡಿದ್ದಾನೆ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ತನಿಖೆ ಮಾಡಲು ಏನು ದಾಡಿ? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಆಟವಾಡುತ್ತಿದ್ದಾರೆ. ವಿಜಯೇಂದ್ರನ ಕರ್ಮಕಾಂಡಗಳು ಸಾಕಷ್ಟಿವೆ. ಹಲ್ಕಾ ಕೆಲಸಗಳು ಕೂಡ ಸಾಕಷ್ಟಿವೆ. ಇಂತಹವನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಮ್ಮ ಬೇಡಿಕೆ ಇರುವುದು ಮೂರು. ಮೊದಲನೆಯದು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ಹಿಂದುತ್ವ ಎಂದಿದ್ದಾರೆ. ಪ್ರಧಾನ ಮಂತ್ರಿಗಳೇ ಕುಟುಂಬ ರಾಜಕಾರಣ ಬೇಡ ಎನ್ನುತ್ತಾರೆ. ಇಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬದ ಮೇಲೆ ಯಾರಿಗೂ ವಿಶ್ವಾಸವಿಲ್ಲ. ವಿಜಯೇಂದ್ರ ಕಾಂಗ್ರೆಸ್ ಕೊಟ್ಟ ಭಿಕ್ಷೆಯಿಂದ ಆಗಿರುವ ಶಾಸಕ. ಡಿಕೆ ಶಿವಕುಮಾರ್ ಆಶೀರ್ವಾದದಿಂದಲೇ ವಿಜಯೇಂದ್ರ ವಿಧಾನಸೌಧದ ಮೆಟ್ಟಿಲು ಹತ್ತಿದ್ದಾನೆ ಎಂದಿದ್ದಾರೆ.
ದೆಹಲಿಗೆ ಬಂದು ಈಗಾಗಲೇ ನಾವೆಲ್ಲ ಟೀಂ ಸೇರಿದ್ದೇವೆ. ಮೊದಲಿಗೆ ಬಿಜೆಪಿ ಸಂಸದರ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಈಗಾಗಲೇ ನಾವು ಹಲವರನ್ನು ಭೇಟಿಯಾಗಿದ್ದೇವೆ. ಆದರೆ, ಗುಂಪಾಗಿ ಹೋಗಿ ಭೇಟಿ ಮಾಡುತ್ತಿಲ್ಲ. ನಿನ್ನೆಯೇ ಕೆಲ ನಾಯಕರನ್ನ ಭೇಟಿಯಾಗಿದ್ದು, ಇಂದೂ ಕೂಡ ಭೇಟಿಯಾಗುತ್ತೇವೆ ಎಂದು ಯತ್ನಾಳ್ ಹೇಳಿದ್ದಾರೆ. ಸದ್ಯ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ತಪ್ಪಿಸಲು ಯತ್ನಾಳ್ ಬಣ ದೆಹಲಿಯಲ್ಲಿ ಬಿರುಸಿನ ತಂತ್ರ ರೂಪಿಸಿದೆ.












Click it and Unblock the Notifications