ವಿಪಕ್ಷ, ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ; ಯತ್ನಾಳ್ ಒಬ್ಬ ಮಹಾ ಸುಳ್ಳುಗಾರ: ಸಿದ್ದರಾಮಯ್ಯ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 07: ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷರ ಸ್ಥಾನ ಕ್ಕೆ ಪ್ರಯತ್ನಿಸಿದ್ದರು. ಎರಡೂ ಸಿಕ್ಕದ ಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ, ಯತ್ನಾಳ್ ಒಬ್ಬ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ದ್ವೇಷದ, ಅಲ್ಪಸಂಖ್ಯಾತರ ವಿರುದ್ಧ ದ ರಾಜಕಾರಣ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಹಾಶಿಮ್ ಪೀರಾ ದರ್ಗಾದ ಧರ್ಮಾಧಿಕಾರಿ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮೀ ಮೌಲ್ವಿ ಜೊತೆಗೆ ವೇದಿಕೆ ಹಂಚಿಕೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿ ಹಾಶ್ಮೀ ಅವರೊಂದಿಗೆ ಬಹಳ ವರ್ಷಗಳಿಂದ ಸಂಬಂಧ ಇದೆ. ಅವರು ಚುನಾವಣೆ ಗೆಲ್ಲಲು ಈ ರೀತಿ ಮಾಡಬಾರದು. ಯತ್ನಾಳ್ ಮಹಾ ಸುಳ್ಳುಗಾರ. ಹಾಶ್ಮೀ ಅವರ ಮೇಲಿನ ಆರೋಪ ಸಾಬೀತು ಮಾಡಲಿ. ಅವರದ್ದೇ ಸರ್ಕಾರ 10 ವರ್ಷಗಳಿಂದ ಇದೆ. ಇಷ್ಟು ವರ್ಷ ಏನು ಮಾಡುತ್ತಿದ್ದರು. ಬರೀ ಆರೋಪ ಮಾಡುವುದಲ್ಲ ಅದನ್ನು ಸಾಬೀತು ಮಾಡಲಿ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ ದಕ್ಷಿಣ ಭಾರತದಲ್ಲಿ ಬಿಜೆಪಿ ವಿಸ್ತರಣೆ ಇರಲಿ, ಅದು ಇಲ್ಲವೇ ಇಲ್ಲ ಎಂದ ಅವರು, ಗೋವಿಂದ ಕಾರಜೋಳ ಅವರು ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಹಣ ಬೇರೆಡೆಗೆ ಉಪಯೋಗವಾಗುತ್ತಿರುವ ಆರೋಪಕ್ಕೆ ಉತ್ತರಿಸಿ, ಅವರು ಎಸ್.ಸಿ.ಎಸ್.ಪಿ/ ಟಿ. ಎಸ್.ಪಿ ಅನುದಾನ ಅವರ ಕಾಲದಲ್ಲಿ ಯಾಕೆ ಕಡಿಮೆಯಾಯಿತು ಎಂದು ಉತ್ತರ ಕೊಡಬೇಕು. ನಾನು ಕಡೆ ಬಜೆಟ್ ಮಂಡಿಸಿದಾಗ 30 ಸಾವಿರ ಕೋಟಿ ರೂ.ಗಳ ಅನುದಾನವಿತ್ತು. ಇವರ ಕಾಲಕ್ಕೆ 25 ಸಾವಿರ ಕೋಟಿಯಾಗಿದೆ. ಯಾಕೆ ಆಯ್ತು ಎಂದು ಉತ್ತರ ಕೊಡಬೇಕು ಎಂದರು.











Click it and Unblock the Notifications