ಬ್ರದರ್ ವಿರುದ್ಧ ತನಿಖೆ ಮಾಡಿಸುತ್ತಾರಾ?; ಸಿದ್ದರಾಮಯ್ಯಗೆ ಪ್ರಶ್ನೆ
ಬೆಂಗಳೂರು, ಆಗಸ್ಟ್ 09; ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಮಿಷನ್ ಆರೋಪಗಳು ಭಾರೀ ಸದ್ದು ಮಾಡಿದ್ದವು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಿನಲ್ಲಿಯೇ ಮತ್ತೆ ಇದೇ ಆರೋಪಗಳು ಕೇಳಿಬರುತ್ತಿವೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ.
ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಮಾಡಿರುವ ಬಿಬಿಎಂಪಿ ಗುತ್ತಿಗೆದಾರರ ಸಂಘ ಕಾಂಗ್ರೆಸ್ ಹೈಕಮಾಂಡ್ಗೆ ಸಹ ಈ ಕುರಿತು ದೂರು ನೀಡಿದೆ ಎಂಬುದು ಸುದ್ದಿ.

ರಾಜ್ಯದ ಪ್ರತಿಪಕ್ಷ ಬಿಜೆಪಿ ಇದೇ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದೆ. ಬಾಕಿ ಇರುವ ಬಿಲ್ ಪಾವತಿಗಾಗಿ ಗುತ್ತಿಗೆದಾರರಿಂದ 15 ಪರ್ಸೆಂಟ್ ತನಕ ಕಮಿಷನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪ ಮಾಡಿದ್ದಾರೆ.
ಬ್ರದರ್ ವಿರುದ್ಧ ತನಿಖೆ ಮಾಡಿಸುತ್ತಾರಾ?; ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೇ ವಿಚಾರ ಮುಂದಿಟ್ಟುಕೊಂಡು ಬುಧವಾರ ಟ್ವೀಟ್ ಮಾಡಿದ್ದಾರೆ. 'ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ?' ಎಂದು ಪ್ರಶ್ನೆ ಮಾಡಿದ್ದಾರೆ.
ಯತ್ನಾಳ್ ತಮ್ಮ ಟ್ವೀಟ್‌ನಲ್ಲಿ, 'ಬಿಜೆಪಿ ಸರ್ಕಾರದ ಹಗರಣಗಳನ್ನು ನ್ಯಾಯ ಮೂರ್ತಿಯವರ ನೇತೃತ್ವದ ಆಯೋಗದ ಮೂಲಕ ತನಿಖೆ ಮಾಡಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು ಈಗ ಗುತ್ತಿಗೆದಾರರು ಆರೋಪ ಮಾಡಿರುವ ಅವರ "ಬ್ರದರ್" ವಿರುದ್ಧ ತನಿಖೆ ಮಾಡಿಸುತ್ತಾರಾ?' ಎಂದು ಕೇಳಿದ್ದಾರೆ.
'ಗುತ್ತಿಗೆದಾರರು ನೊಣವಿನಕೆರೆ ಅಜ್ಜಯ್ಯನವರ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸಿರುವುದು ನೋಡಿದರೆ "ಬ್ರದರ್" ಡಿಮ್ಯಾಂಡ್ ಗುತ್ತಿಗೆದಾರರಿಗೆ ಬಹಳ ಸಂಕಷ್ಟಕ್ಕೆ ದೂಡಿದೆ' ಎಂದು ಹೇಳಿದ್ದಾರೆ.
'ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ? ಅಥವಾ ನಿಮ್ಮ ಗಮನಕ್ಕೆ ಬಾರದೆ ನಿಮ್ಮ "ಬ್ರದರ್" ನಿಮ್ಮನ್ನೂ ಮೀರಿಸಿದ್ದಾರಾ? ಕ್ರಮಕೈಗೊಳ್ಳುವಿರಾ? ಅಥವಾ ಅವರು ಗುತ್ತಿಗೆದಾರರೇ ಅಲ್ಲ ಅಂತ ಸರ್ಟಿಫಿಕೇಟ್ ನೀಡುತ್ತೀರಾ!' ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ಡಿ. ಕೆ. ಶಿವಕುಮಾರ್ ಹೇಳಿಕೆ; ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರ ಪತ್ರದ ಬಗ್ಗೆ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ಗುತ್ತಿಗೆದಾರರು ರಾಜ್ಯಪಾಲರಿಗೆ ಪತ್ರ ಬರೆದಿವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ವಿರೋಧ ಪಕ್ಷ, ಆಡಳಿತ ಪಕ್ಷದವರನ್ನು ಕೇಳಲಿ ಅಥವ ರಾಜ್ಯಪಾಲರಿಗೆ ಪತ್ರ ಬರೆಯಲಿ. ನಮಗೆ ಯಾರಿಗೂ ತೊಂದರೆ ಕೊಡುವ ಉದ್ದೇಶವಿಲ್ಲ. ಸರಿಯಾಗಿ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಸಿಗಬೇಕು" ಎಂದರು.
ಗುತ್ತಿಗೆದಾರರು ಬಿಲ್ ಪಾವತಿಸಬೇಕು ಅಥವ ದಯಾಮರಣ ನೀಡಬೇಕು ಎಂದು ಬರೆದಿರುವ ಪತ್ರದ ಬಗ್ಗೆ ಮಾತನಾಡಿ, "ಇದು ನನ್ನ ಸ್ನೇಹಿತರ ರಾಜಕೀಯ ಪ್ರೇರಿತ ಯೋಜನೆಯಾಗಿದೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂದು ಗೊತ್ತಿದೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟು ಬಹುಮತ ಕೊಟ್ಟಿದ್ದಾರೆ. ನಾವು ಭ್ರಷ್ಟಾಚಾರ ತಡೆಯಬೇಕಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಬಿಬಿಎಂಪಿಯ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಗಾಗಿ 15 ಪರ್ಸೆಂಟ್ ತನಕ ಕಮಿಷನ್ ನೀಡುವಂತೆ ಡಿ. ಕೆ. ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ. ನಾವು ಮಾಡುತ್ತಿರುವ ಆರೋಪ ಸುಳ್ಳು ಎಂದು ಹೇಳುವುದಾದರೆ ಡಿ. ಕೆ. ಶಿವಕುಮಾರ್ ಅವರು ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದರು.
ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ 15 ಪರ್ಸೆಂಟ್ ಕಮಿಷನ್ ಕೊಟ್ಟರಷ್ಟೇ ಬಾಕಿ ಹಣ ಬಿಡುಗಡೆ ಮಾಡುವ ಡಿಮ್ಯಾಂಡ್ ಇಡಲಾಗಿದೆ ಎಂದು ಆರೋಪ ಮಾಡಿದ್ದರು. ಈ ಆರೋಪ ಕೇಳಿ ಬಂದ ಬಳಿಕ ಈಗ ಕಮಿಷನ್ ವಿಚಾರ ಚರ್ಚೆಗೆ ಬಂದಿದೆ.
ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ, ಕಮಿಷನ್ ಆರೋಪಗಳನ್ನು ಮಾಡುತ್ತಿವೆ. ಈ ಹೊತ್ತಿನಲ್ಲಿಯೇ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ.












Click it and Unblock the Notifications