ಕನಕಪುರಕ್ಕೆ ಕಾಲಿಡಲು ಭಯ; ಕೋರ್ಟ್‌ಗೆ ಯತ್ನಾಳ್ ಹೇಳಿಕೆ!
ಬೆಂಗಳೂರು, ಮಾರ್ಚ್ 19: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಮ್ಮ ವಿರುದ್ಧ ಕನಕಪುರದಲ್ಲಿ ಹೂಡಿರುವ ವಾಜ್ಯದ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆಗಾಗಿ ನಾನು ಕನಕಪುರಕ್ಕೆ ಭೇಟಿ ನೀಡಿದರೆ ನನ್ನ ಮೇಲೆ ದಾಳಿಯಾಗುವ ಸಂಭವವಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆತಂಕ ವ್ಯಕ್ತಪಡಿದ್ದಾರೆ.
ಅಲ್ಲದೆ, ತಮ್ಮ ವಿರುದ್ಧ ಡಿ. ಕೆ. ಶಿವಕುಮಾರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ಬೆಂಗಳೂರಿನ ಕೋರ್ಟ್‌ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಯತ್ನಾಳ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿ ಡಿ. ಕೆ. ಶಿವಕುಮಾರ್‌ಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ ಮಾರ್ಚ್ 20ಕ್ಕೆ ಮುಂದೂಡಿದೆ.

ಯತ್ನಾಳ್ ಪರ ವಕೀಲರು, ಕನಕಪುರ ನ್ಯಾಯಾಲಯದ ವ್ಯಾಪ್ತಿಯಲ್ಲಿ ದಾವೆಯ ವಿಚಾರಣೆ ನಡೆಸುವುದಕ್ಕೆ ಸಕಾರಣವಿಲ್ಲ. ಹಾಗಾಗಿ, ಕನಕಪುರ ಹಿರಿಯ ಸಿವಿಲ್ ಕೋರ್ಟ್ ಮತ್ತು ಜೆಎಂಎಫ್ ಸಿಯಲ್ಲಿ ಹೂಡಲಾಗಿರುವ ಅಸಲು ದಾವೆಯ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.
ಬೆಂಗಳೂರಿಗೆ ವರ್ಗಾವಣೆ ಮಾಡಿ: ಅರ್ಜಿಯಲ್ಲಿ ನನಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ಶಿವಕುಮಾರ್ ಈ ದಾವೆಯನ್ನು ಕನಕಪುರದ ನ್ಯಾಯಾಲಯದಲ್ಲಿ ಹೂಡಿದ್ದಾರೆ. ವಿಜಯಪುರದ ಶಾಸಕನಾದ ನಾನು ಅಲ್ಲಿ ಹೇಳಿಕೆ ನೀಡಿದ್ದು, ಇಲ್ಲಿ ದಾವೆ ಹೂಡಲಾಗಿದೆ.
ಎರಡು ಪಟ್ಟಣಗಳ ಮಧ್ಯೆ 565 ಕಿ. ಮೀ. ಅಂತರವಿದ್ದು, ಇಷ್ಟೊಂದು ಸುದೀರ್ಘ ಅಂತರವನ್ನು ಕ್ರಮಿಸುವುದು ಕಷ್ಟ. ಶಿವಕುಮಾರ್ ಪ್ರಭಾವಿಯಾಗಿದ್ದು ಪ್ರಕರಣದಲ್ಲಿನ ಸಾಕ್ಷ್ಯ ತಿರುಚುವ ಸಾಧ್ಯತೆ ಇದೆ. ಈ ಎರಡೂ ಕಾರಣದಿಂದ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಬೇಕು ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಅರ್ಜಿಯಲ್ಲಿ ಕೋರಿದ್ದಾರೆ.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ 2019ರ ಜೂನ್ 23ರಂದು ಯತ್ನಾಳ್ ಅವರು ವಿಜಯಪುರದಲ್ಲಿ, ಡಿ. ಕೆ. ಶಿವಕುಮಾರ್ ಬಿಜೆಪಿ ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೋರಿದ್ದಾರೆ.
ಈ ಸಂಬಂಧ ನಮ್ಮ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆಂಬುದು ನನಗೆ ತಿಳಿದುಬಂದಿದೆ ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯಿಂದ ನನ್ನ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗಿದ್ದು 204 ಕೋಟಿ ರೂ. ಪರಿಹಾರ ತುಂಬಿಕೊಡಲು ಪ್ರತಿವಾದಿ ಯತ್ನಾಳ್ ಗೆ ಆದೇಶಿಸಬೇಕೆಂದು ಕೋರಿ ಶಿವಕುಮಾರ್ ಕನಕಪುರ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.












Click it and Unblock the Notifications