Bandipur Safari: ಬಂಡೀಪುರ, ನಾಗರಹೊಳೆ ಸಫಾರಿಯಲ್ಲಿ ಮಹತ್ವದ ಬದಲಾವಣೆ
ಪ್ರವಾಸಿಗರ ನೆಚ್ಚಿನ ತಾಣಗಳಾದ ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಸಫಾರಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಈ ಎರಡೂ ಪ್ರದೇಶಗಳು ಹುಲಿ ಸಂರಕ್ಷಿತ ಪ್ರದೇಶಗಳಾಗಿದ್ದು, ಸಫಾರಿ ಮಾಡಲೆಂದೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ, ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶವು ಸಫಾರಿಪ್ರಿಯರಿಗೆ ತುಸು ಬೇಸರ ಉಂಟುಮಾಡುವಂತಿದೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಸಂಬಂಧ ಮಹತ್ವದ ಆದೇಶ ಹೊರಡಿಸಿದ್ದಾರೆ. ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಜೀವಿಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಫಾರಿಯ ಟ್ರಪ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಆದರೆ ರಾತ್ರಿ 6 ಗಂಟೆಯ ನಂತರವೂ ಕಾಡಿನಲ್ಲಿ ಸಫಾರಿ ವಾಹನಗಳು ಸಂಚರಿಸುತ್ತಿವೆ. ವಾಹನದ ಬೆಳಕು ಮತ್ತು ಶಬ್ದದಿಂದ ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬಂದು ಉಪಟಳ ನೀಡುತ್ತಿವೆ ಎಂದು ವಿವಿಧ ರೈತ ಸಂಘಟನೆಗಳು ಆರೋಪಿಸಿ, ಕೂಡಲೇ ಸಫಾರಿ ನಿಲ್ಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ಸಫಾರಿಯು ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಪರಿಸರ ಆಸಕ್ತರಿಗೆ ಶಿಕ್ಷಣವೂ ಆಗಿದೆ. ಹೀಗಾಗಿ ಹಲವರಿಗೆ ಜೀವನೋಪಾಯವೂ ಆಗಿದೆ. ಈ ನಿಟ್ಟಿನಲ್ಲಿ ನಾಳೆಯಿಂದಲೇ ತಕ್ಷಣಕ್ಕೆ ಜಾರಿ ಬರುವಂತೆ ಹಾಲಿ ಇರುವ ಸಫಾರಿಯ ಟ್ರಪ್ ಗಳ ಪೈಕಿ ಕೊನೆಯ ಒಂದು ಟ್ರಿಪ್ ನಿಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದ್ದಾರೆ.
ಏನೆಲ್ಲ ಬದಲಾವಣೆ?
ಬಂಡೀಪುರದಲ್ಲಿ ಈಗ ಇರುವ ಸಫಾರಿಯ ಟ್ರಿಪ್ಗಳ ಪೈಕಿ ಕೊನೆಯ ಒಂದು ಟ್ರಿಪ್ ಅನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ದೇಶದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರ ಸಫಾರಿಯ ಟ್ರಿಪ್‌ನಲ್ಲಿ ಮಹತ್ವದ ಬದಲಾವಣೆ ಈಗಿನಿಂದಲೇ ಜಾರಿಯಾಗಿದೆ.
ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದ್ದು ಮಾತ್ರವಲ್ಲದೆ, ರೈತ ಸಂಘಟನೆಗಳ ಒತ್ತಾಯದ ಮೇರೆಗೆ ಬಂಡೀಪುರ ಹಾಗೂ ನಾಗರಹೊಳೆ ಸಫಾರಿಯಲ್ಲಿ 1 ಟ್ರಿಪ್ ಕಡಿಮೆ ಮಾಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಬಂಡೀಪುರದಲ್ಲಿ ಸದ್ಯ 5 ಜಿಪ್ಸಿ, 5 ಕ್ಯಾಂಪರ್ ಹಾಗೂ 7 ಮಿನಿ ಬಸ್ ಸೇರಿದಂತೆ ಒಟ್ಟು 17 ವಾಹನಗಳು ಸಫಾರಿಗೆ ಹೋಗುತ್ತವೆ. ಪ್ರತಿ ದಿನ ಬೆಳಗ್ಗೆ 6.30 ಹಾಗೂ 8 ಗಂಟೆಗೆ ಎರಡು ಟ್ರಿಪ್ ಆದರೆ, ಮಧ್ಯಾಹ್ನದಿಂದ ಸಂಜೆವರೆಗೆ ಮೂರು ಟ್ರಿಪ್ ತೆರಳುತ್ತಿದ್ದವು. ಇದರಲ್ಲಿ ಒಂದು ಟ್ರಿಪ್ ಇನ್ಮುಂದೆ ಇರಲ್ಲ.
ಜಂಗಲ್ ಲಾಡ್ಜ್ನಿಂದಲೂ 10 ವಾಹನಗಳು ಸಫಾರಿಗೆ ತೆರಳುತ್ತವೆ. ಸಂಜೆ 5ರ ನಂತರ ಹೊರಡುವ ಸಫಾರಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಈ ಅವಧಿಯಲ್ಲೇ ಪ್ರವಾಸಿಗರು ಹೆಚ್ಚಾಗಿ ಸಫಾರಿಗೆ ಬರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಈ ಕೊನೆಯ ಟ್ರಿಪ್ ರದ್ದಾಗಲಿದೆ. ಈ ಆದೇಶದ ಅನುಸಾರ ಕ್ರಮ ಕೈಗೊಳ್ಳುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications