ಬಳ್ಳಾರಿ ಗಲಭೆ; ತಪ್ಪು ಯಾರೇ ಮಾಡಿದ್ರೂ ಕ್ರಮ, ಮೃತನ ಕುಟುಂಬಕ್ಕೆ ಸರ್ಕಾರಿ ಕೆಲಸ: ಡಿ.ಕೆ.ಶಿವಕುಮಾರ್
ಬಳ್ಳಾರಿ: ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್-ಬಿಜೆಪಿ ಗಲಭೆ ಕುರಿತು ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಬ್ಯಾನರ್ ಗಲಭೆ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಮೃತ ಕಾರ್ಯಕರ್ತನ ಕುಟುಂಬದ ಜೊತೆ ನಮ್ಮ ಪಕ್ಷವಿದೆ. ಕಾನೂನು ಚೌಕಟ್ಟಿನಲ್ಲಿ ಮೃತ ಕಾರ್ಯಕರ್ತನ ಕುಟುಂಬಕ್ಕೆ ಪಕ್ಷದಿಂದ ನೆರವು ಹಾಗೂ ಸರ್ಕಾರಿ ಕೆಲಸ ನೀಡುವ ಬಗ್ಗೆ ಆಲೋಚನೆ ಮಾಡಲಾಗುವುದು. ಈ ಹಿಂದೆ ಯಾವ ತೀರ್ಮಾನ ಆಗಿದೆ ಎಂದು ನೋಡಬೇಕಿದೆ ಎಂದಿದ್ದಾರೆ.
ಅಸೂಯೆಯಿಂದ ಬ್ಯಾನರ್ ತೆರವು
ವಾಲ್ಮೀಕಿ ಅವರ ಪ್ರತಿಮೆ ನಿರ್ಮಾಣ ಹಾಗೂ ಅದಕ್ಕೆ ಜನರಿಂದ ಸಿಗುತ್ತಿರುವ ಸ್ವಾಗತ ಸಹಿಸಲಾಗದೆ, ಅಸೂಯೆಯಿಂದ ಬ್ಯಾನರ್ ತೆರವುಗೊಳಿಸಲು ಮುಂದಾಗಿದ್ದೇ ಈ ದುರ್ಘಟನೆಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ನಮಗೆ ಮಾಹಿತಿ ನೀಡಿದೆ. ಸ್ಥಳೀಯ ನಾಯಕರು ಇಲ್ಲಿ ಪುತ್ಥಳಿ ಆಗಬೇಕು ಎಂದು ಕೈಗೊಂಡಿರುವ ತೀರ್ಮಾನ ಸರಿಯಾಗಿದೆ. ಡಿಸೆಂಬರ್ 24ರಿಂದ 29ರವರೆಗೆ ಈ ಜಿಲ್ಲೆಯ ಜನ ಬಹಳ ಸಂಭ್ರಮದಿಂದ ಪುತ್ಥಳಿ ಸ್ವಾಗತ ಕಾರ್ಯಕ್ರಮವನ್ನು ಹಬ್ಬದಂತೆ ಸಂಭ್ರಮಿಸಿದ್ದರು ಎಂದು ವಿವರಿಸಿದ್ದಾರೆ.

ಈಗ ಕೇವಲ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದಿದೆ. ಜನವರಿ 1ರಂದು ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಕಟ್ಟಿದ್ದಾರೆ. ಬ್ಯಾನರ್ ಕಟ್ಟುವ ವಿಚಾರದಲ್ಲಿ ಜನಾರ್ದನ ರೆಡ್ಡಿ ಅಥವಾ ಶ್ರೀರಾಮುಲು ಅವರಿಗೆ ಅಸಮಾಧಾನವಿದ್ದಿದ್ದರೆ, ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು, ಶಾಸಕರು, ಇತರೆ ನಾಯಕರಿಗೆ ಕರೆ ಮಾಡಿ, ಬ್ಯಾನರ್ ತೆಗೆಯಿರಿ ಎಂದಿದ್ದರೆ ಅವರು ತೆರವು ಮಾಡುತ್ತಿದ್ದರು. ಆದರೆ ಅವರು ಯಾರಿಗೂ ಸೂಚನೆ ನೀಡಿಲ್ಲ ಎಂದು ದೂರಿದ್ದಾರೆ.
ಬದಲಿಗೆ ವಾಲ್ಮೀಕಿ ಅವರಿಗೆ ಅಪಮಾನವಾಗುವ ರೀತಿ ಬ್ಯಾನರ್ ತೆರವುಗೊಳಿಸಿದ್ದಾರೆ. ನಮ್ಮ ಕಾರ್ಯಕರ್ತರು ಮತ್ತೆ ಬ್ಯಾನರ್ ಹಾಕಲು ಹೋಗಿದ್ದಾರೆ. ನಂತರದ ಘಟನೆಗಳನ್ನು ನಾನು ನೋಡಿದ್ದೇನೆ. ಅವರ ನೇತೃತ್ವದಲ್ಲೇ ಬ್ಯಾನರ್ ಹರಿದು ಹಾಕಿದ್ದಾರೆ. ಇದು ಸರಿಯೋ ತಪ್ಪೋ ಎಂದು ನಾನು ತೀರ್ಮಾನ ಮಾಡುವುದಿಲ್ಲ, ನೀವುಗಳೇ ತೀರ್ಮಾನ ಮಾಡಿ ಎಂದಿದ್ದಾರೆ.
ಭದ್ರತಾ ಸಿಬ್ಬಂದಿ ನಡೆ ಸರಿ ಎನ್ನಲ್ಲ
ನಾನು ಯಾರ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಲು ಇಲ್ಲಿಗೆ ಬಂದಿಲ್ಲ. ಕಾನೂನು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಬಹಳ ದಿಟ್ಟವಾಗಿ ಅಗತ್ಯ ತೀರ್ಮಾನ ತೆಗೆದುಕೊಂಡಿದ್ದಾರೆ. ಭದ್ರತಾ ಸಿಬ್ಬಂದಿ ನಡೆ ಸರಿ ಎಂದು ನಾನು ಹೇಳುವುದಿಲ್ಲ. ಕಾನೂನು ಸೂಕ್ತ ಕ್ರಮ ಕೈಗೊಳ್ಳಲಿದೆ. ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ. ಖಾಸಗಿ ಭದ್ರತಾ ಸಿಬ್ಬಂದಿ ಹೊಂದಿರುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದಿದ್ದಾರೆ.
ಈ ಅಹಿತಕರ ಘಟನೆ ಆಗಬಾರದಿತ್ತು. ನಾನು ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಬಳ್ಳಾರಿಯ ಇತಿಹಾಸ ದೊಡ್ಡದಿದೆ. ದಯವಿಟ್ಟು ಇದರ ಗೌರವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಳ್ಳಬೇಡಿ. ನಾನು ನಮ್ಮವರಿಗೆ ಬುದ್ಧಿವಾದ ಹೇಳಿದ್ದು, ಮುಂದೆಯೂ ಹೇಳುತ್ತೇನೆ. ಬಿಜೆಪಿಯವರಿಗೆ ಅವರ ನಾಯಕರು ಬಹಳ ದೊಡ್ಡವರಿದ್ದಾರೆ, ಅವರಿಗೆ ಬಿಡುತ್ತೇನೆ ಎಂದು ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬಳ್ಳಾರಿಯ ಗಲಭೆಯಲ್ಲಿ ಮೃತಪಟ್ಟ ರಾಜಶೇಖರ್ ರೆಡ್ಡಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಬಳ್ಳಾರಿಯ ಹಿರಿಯ ಅಧಿಕಾರಿಗಳು ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಂಸದರೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಪ್ರತ್ಯೇಕವಾಗಿ ಸಭೆ ನಡೆಸಿ, ಗಲಭೆಯ ಸತ್ಯಾಸತ್ಯತೆಗಳ ಕುರಿತು ಮಾಹಿತಿ ಪಡೆದರು. ಬಳ್ಳಾರಿಯಲ್ಲಿ ಹೊಸ ವರ್ಷದ ದಿನವೇ ನಡೆದ ಈ ಗಲಭೆಯಲ್ಲಿ ನೆತ್ತರು ಹರಿದಿತ್ತು.












Click it and Unblock the Notifications