ಸಿದ್ದರಾಮಯ್ಯ ಹಾದಿಯಲ್ಲಿ ಯುವ ನಾಯಕಿ ಸಂಯುಕ್ತಾ ಪಾಟೀಲ್ : ನಾಮಪತ್ರ ಸಲ್ಲಿಕೆ ವೇಳೆ ಡಿಫ್ರೆಂಟ್ ಲುಕ್
ಬಾಗಲಕೋಟೆ, ಏಪ್ರಿಲ್ 15: ಲೋಕಸಭಾ ಚುನಾವಣಾ ರಾಜ್ಯದಲ್ಲಿ ಭರ್ಜರಿ ಪ್ರಚಾರಕಾರ್ಯ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಯುವ ನಾಯಕಿ ಹಾಗೂ ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಇಂದು( ಸೋಮವಾರ) ಸರಳವಾಗಿ ನಾಮಪತ್ರ ಸಲ್ಲಿಸಿದ್ದು, ಕಂಬಳಿ ಹೊದ್ದು ಬೃಹತ್ ರ್‍ಯಾಲಿ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗ್ಗೆ ಬಾದಾಮಿಯ ಬನಶಂಕರಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಅವರಿಗೆ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಾಸಕರಾದ ಭೀಮಸೇನ ಚಿಮ್ಮನಕಟ್ಟಿ, ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಮತ್ತು ಎಂ.ಬಿ. ಸೌದಾಗಾರ್ ಅವರು ಈ ವೇಳೆ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಹಲವಾರು ಮುಖಂಡರು ಹಾಜರಿದ್ದು, ಸಂಯುಕ್ತ ಪಾಟೀಲ ಅವರಿಗೆ ಶುಭ ಕೋರಿ, ಚುನಾವಣೆಯಲ್ಲಿ ಭಾರಿ ಅಂತರದ ಜಯ ಲಭಿಸಲಿ ಎಂದು ಹಾರೈಸಿದರು.ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳುವ ಸಂದರ್ಭದಲ್ಲಿ ಸಂಯುಕ್ತ ಪಾಟೀಲ ಅವರಿಗೆ ಕಂಬಳಿ ಹೊದಿಸಿ ಶುಭ ಕೋರಲಾಯಿತು. ಸಂಯುಕ್ತ ಪಾಟೀಲ ಅವರೊಂದಿಗೆ ಇದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಅಜಯಕುಮಾರ ಸರನಾಯಕ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಗಮನಿಸಿರುವ ಮತದಾರರು ನಿಶ್ಚಿತವಾಗಿ ಸಂಯುಕ್ತ ಪಾಟೀಲ ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಸತತವಾಗಿ 20 ವರ್ಷ ಸಂಸತ್ ಸದಸ್ಯರಾಗಿರುವ ಪಿ.ಸಿ. ಗದ್ದಿಗೌಡರ್ ಬಾಗಲಕೋಟೆ ಅಭಿವೃದ್ಧಿಗೆ ಪ್ರಯತ್ನ ಮಾಡಲಿಲ್ಲ. ಕುಡಚಿ ಬಾಗಲಕೋಟೆ ರೈಲ್ವೆ ಮಾರ್ಗ ಇನ್ನೂ ಪೂರ್ಣಗೊಂಡಿಲ್ಲ. ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಾವುದೆ ಉದ್ಯಮವನ್ನು ಜಿಲ್ಲೆಗೆ ತರಲು ಪ್ರಯತ್ನ ಮಾಡಲಿಲ್ಲ ಎಂದು ಟೀಕೆ ಮಾಡಿದರು. ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ತಾಣಗಳಿವೆ. ಕೇಂದ್ರದ ಅನುದಾನ ತಂದು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಗದ್ದಿಗೌಡರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ ಎಂದರು.












Click it and Unblock the Notifications