B Nagendra: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ
B.Nagendra: ರಾಜ್ಯ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯ ರಾಜಕೀಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ಕರ್ನಾಟಕ ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಕ್ರಮ ಹಣ ವರ್ಗಾವಣೆ ಆರೋಪ
ನಿಗಮದ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದನದ ಒಳಗೆ ಹಾಗೂ ಹೊರಗೆ ತೀವ್ರ ಹೋರಾಟ ನಡೆಸಿದ್ದವು. ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಬಾರದು ಎಂಬ ಉದ್ದೇಶದಿಂದ ನಾಗೇಂದ್ರ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸಿಎಂ ಡಿ.ಕೆ.ಶಿವಕುಮಾರ್‌ಗೆ ರಾಜೀನಾಮೆ ಪತ್ರ ರವಾನೆ
ಬಿ.ನಾಗೇಂದ್ರ ಅವರು ಗುರುವಾರವೇ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಿಸಿದ್ದಾರೆ. ಇದನ್ನು ಸಿಎಂ ಮೂಲಕ ರಾಜ್ಯಪಾಲರ ಅಂತಿಮ ಅಂಗೀಕಾರಕ್ಕಾಗಿ ರವಾನೆ ಮಾಡಬೇಕಾಗಿದೆ. ರಾಜ್ಯಪಾಲರು ಸಹಿ ಮಾಡಿದ ಬಳಿಕವಷ್ಟೇ ಅವರ ರಾಜೀನಾಮೆ ಅಧಿಕೃತವಾಗಿ ಅನುಮೋದನೆಗೊಳ್ಳಲಿದೆ.
ಕಾಂಗ್ರೆಸ್ ಮುಂದಿನ ನಿಲುವೇನು?
ನಾಗೇಂದ್ರ ಅವರ ರಾಜೀನಾಮೆ ಪತ್ರ ಕೈಸೇರಿದರೂ, ಅದನ್ನು ತಕ್ಷಣವೇ ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಸಚಿವ ಸಂಪುಟದಲ್ಲಿಯೇ ಮುಂದುವರಿಸಬೇಕೇ ಎಂಬ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ತೀವ್ರ ಚರ್ಚೆ ಮತ್ತು ಗೊಂದಲಗಳು ಏರ್ಪಟ್ಟಿವೆ ಎನ್ನಲಾಗುತ್ತಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಆರೋಪಗಳಷ್ಟೇ ಇದ್ದು, ಕೋರ್ಟ್‌ನಿಂದ ಕ್ಲೀನ್ ಚಿಟ್ ಸಿಗುವ ಭರವಸೆಯನ್ನು ನಾಗೇಂದ್ರ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅಂತಿಮ ತೀರ್ಮಾನ ಕೈಗೊಳ್ಳಲು ನಾಯಕರು ದೆಹಲಿಯ ವರಿಷ್ಠರಿಂದ ಏನು ಸಲಹೆ ಬರಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.


Click it and Unblock the Notifications
