ರೈಲು ಟಿಕೆಟ್ ಈಗ ನಿಮಿಷಗಳಲ್ಲಿ, ಕರ್ನಾಟಕದ ರೈಲು ನಿಲ್ದಾಣಗಳಲ್ಲಿ ಎಟಿವಿಎಂ ಸೌಲಭ್ಯ: ಬಳಸೋದು ಹೇಗೆ?
ಬೆಂಗಳೂರು: ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಭಾರತೀಯ ರೈಲ್ವೆ ಇಲಾಖೆಯು ಪ್ರಮುಖ ಉಪಕ್ರಮಗಳಲ್ಲಿ ಟಿಕೆಟ್ ವಿತರಿಸುವ ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್ ಮಷಿನ್ (ATVM) ಸಹ ಒಂದು. ಇದರಿಂದ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಮಿಷಿಗಳ ಕಾಲ ನಿಲ್ದದೇ ಸ್ವಯಂ ಆಗಿ ಸಾಫ್ಟ್ ಟಿಕೆಟ್ ಇಲ್ಲವೇ ಪೇಪರ್ ಟಿಕೆಟ್ ಪಡೆಯಬಹುದು. ಟಿಕೆಟ್ ಜೊತೆಗೆ ಇತರ ಸೌಲಭ್ಯ ನೀಡುವ ಈ ಯಂತ್ರಗಳನ್ನು ಕರ್ನಾಟಕದ ಯಾವೆಲ್ಲ ನಗರಗಳ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ, ಇವುಗಳ ಕೆಲಸವೇನು, ಬಳಕೆ ಹೇಗೆ? ಎಂಬುದನ್ನು ತಿಳಿಯಿರಿ.
ರೈಲು ನಿಲ್ದಾಣಗಳು, ಪಾರ್ಕಿಂಗ್ ಸ್ಥಳಗಳಲ್ಲಿ, ಸ್ಕೈವಾಕ್‌ಗಳಲ್ಲಿ ಈ ಟಿಕೆಟ್ ವಿತರಿಸುವ ಯಂತ್ರಗಳನ್ನು ಅಳವಡಿಸಲಾಗಿರುತ್ತದೆ. ಇವುಗಳ ಅಳವಡಿಕೆ ಮತ್ತು ಬಳಕೆ ಎರಡರಲ್ಲೂ ಹೆಚ್ಚಳವಾಗುತ್ತಿದೆ. ಪ್ರಯಾಣಿಕರು ನೀವು ಪ್ರಯಾಣದ ಅವಸರದಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಕೌಂಟರ್ ಮುಂದೆ ಟಿಕೆಟ್ ಪಡೆಯುವುದು ಕಷ್ಟವಾಗಬಹುದು. ಆ ಕಷ್ಟ ಹಾಗೂ ಕ್ಯೂ ನಲ್ಲಿ ನಿಲ್ಲುವ ಪ್ರಮೇಯವನ್ನು ಈ ಎಟಿವಿಎಂ ತಪ್ಪಿಸುತ್ತದೆ. ನೀವೇ ಖುದ್ದು ಮಾಹಿತಿ ನಮೂದಿಸಿ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.

ರೈಲು ಪ್ರಯಾಣಿಕರು ಸ್ವಯಂ ಆಗಿ ಈ ಯಂತ್ರಗಳನ್ನು ಬಳಸಿ ಪೇಪರ್ ಟಿಕೆಟ್ ಪಡೆಯಬಹುದು. ಇಲ್ಲವೇ ಸ್ಮಾರ್ಟ್ ಟಿಕೆಟ್ ಪಡೆಯಲು ಅವಕಾಶ ಇದೆ. ಸ್ಮಾರ್ಟ್ ಕಾರ್ಡ್, ಡಿಜಿಟಲ್ ಪಾವತಿ, ಕ್ಯೂಆರ್ ಕೋಡ್ ಪಾವತಿಗಳನ್ನು ಈ ಯಂತ್ರಗಳು ಸ್ವೀಕರಿಸುತ್ತವೆ.
ರೈಲು ಟಿಕೆಟ್‌ಗಳನ್ನು ಮಾತ್ರವಲ್ಲದೇ, ಪ್ಲಾಟ್‌ಫಾರ್ಮ್ ಟಿಕೆಟ್, ಸ್ಮಾರ್ಟ್ ಕಾರ್ಡ್ ರಿಚಾರ್ಜ್‌ಗಳನ್ನು ಇದರಲ್ಲಿ ಮಾಡಿಕೊಳ್ಳಲು ಅವಕಾಶ ಇದೆ. ಥರ್ಮಲ್ ಪ್ರಿಂಟರ್, ಬಾರ್‌ಕೋಡ್ ಪ್ರಿಂಟಿಂಗ್, ಸಂವನಹಕ್ಕಾಗಿ ವೈಫೈ ಸೌಲಭ್ಯ ಸಹ ಹೊಂದಿರುತ್ತದೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಪ್ರಮುಖ ಭಾಷೆಗಳಲ್ಲೂ ಈ ಯಂತ್ರ ಕಾರ್ಯ ನಿರ್ವಹಿಸುತ್ತದೆ. ವಿವಿಧ ಭಾಷಿಗರು ಈ ಯಂತ್ರವನ್ನು ಸರಳವಾಗಿ ಬಳಸಬಹುದಾಗಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಎಟಿವಿಎಂ ಮಷಿನ್‌ಗಳಿವೆ: ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ, ಮೈಸೂರು, ಹುಬ್ಬಳ್ಳಿ, ಧಾರವಾಡ, ಹಾಸನ, ದಾವಣಗೆರೆ, ಬೆಳಗಾವಿ ಮತ್ತು ಮಂಗಳೂರು ಸೇರಿದಂತೆ ನೈಋತ್ಯ ರೈಲ್ವೆ ಜಾಲದ ವ್ಯಾಪ್ತಿಯಲ್ಲಿ ಬರುವ ಅನೇಕ ರೈಲು ನಿಲ್ದಾಣಗಳಲ್ಲಿ ಈ ಎಟಿವಿಎಂ ಯಂತ್ರಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚುವರಿ ಟಿಕೆಟ್ ವಿತರಣಾ ವ್ಯವಸ್ಥೆ ಮಾಡಲಾಗಿದೆ.
ಪಾವತಿ ಆಯ್ಕೆಗಳು: ಕೆಲವು ಯಂತ್ರಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳಿಂದ ಹಣ ಸ್ವೀಕರಿಸುತ್ತಿರಲಿಲ್ಲ. ಹೊಸ ಯಂತ್ರಗಳು UPI (Paytm, PhonePe, ಇತ್ಯಾದಿ) ಮತ್ತು ಇತರ ಡಿಜಿಟಲ್ ಪಾವತಿ ಸ್ವೀಕರಿಸುತ್ತವೆ. ಇನ್ನೂ ಕೆಲವು ಸ್ಮಾರ್ಟ್ ಆವೃತ್ತಿ ಯಂತ್ರಗಳು ಬಂದಿವೆ. ಅದರಲ್ಲಿ ನಗದು ಹಣ ಹಾಕಿ ಟಿಕೆಟ್ ಪಡೆಯಲು ಬರುವುದಿಲ್ಲ.
ಎಟಿವಿಎಂ ಯಂತ್ರ ಬಳಸೋದು ಹೇಗೆ?
- ಎಟಿವಿಎಂ ಯಂತ್ರದ ಪರದೆ ಮೇಲೆ ನೀವು ಟ್ಯಾಪ್ ಮಾಡಬೇಕು.
- ಟಿಕೆಟ್ ವಿಭಾಗವನ್ನು ಆಯ್ಕೆ ಮಾಡಬೇಕು. ಅಲ್ಲಿ ನಿಮಗೆ ಬೇಕಾದ ಟಿಕೆಟ್ ಪ್ರಕಾರ ಮತ್ತು ಗಮ್ಯಸ್ಥಾನವನ್ನು ಆಯ್ಕೆ ಮಾಡಿಕೊಳ್ಳಬೇಕು
- ಒಂದೇ ಬಾರಿಗೆ ನಾಲ್ಕೈದು ಟಿಕೆಟ್‌ಗಳನ್ನು ಪಡೆಯಲು ಸಹ ಅವಕಾಶ ಇರುತ್ತದೆ.
- ನಂತರ ನಗದು ಪಾವತಿಸಲು ನೀವು ಪರದೆ ಮೇಲೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ, ಯುಪಿಐ, ಸ್ಕ್ಯಾನ್ ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಬೇಕು.
- ಯಂತ್ರದ ಟಿಕೆಟ್ ಸ್ಲಾಟ್‌ನಲ್ಲಿ ನಿಮಗೆ ಸಿಗುವ ಟಿಕೆಟ್ ಪಡೆದು ಪ್ರಯಾಣ ಆರಂಭಿಸಬಹುದು.
- ನಗದು (ಕ್ಯಾಶ್) ನೀಡಿ ಟಿಕೆಟ್ ಪಡೆಯುವ ಯಂತ್ರಗಳು ಬಂದಿದ್ದು, ಹಣ ಹಾಕಿ, ಟಿಕೆಟ್ ಜೊತೆಗೆ ಚಿಲ್ಲರೆ ಪಡೆಯಬಹುದು.












Click it and Unblock the Notifications