ವಕೀಲರ ಮೇಲೆ ಪೊಲೀಸರಿಂದ ಹಲ್ಲೆ: 3 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ಜನವರಿ 20; ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯ ಸಿವಿಲ್ ಸ್ವರೂಪದ ವ್ಯಾಜ್ಯದಲ್ಲಿ ಮಧ್ಯಪ್ರವೇಶಿಸಿ ವಕೀಲರೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ನ್ಯಾಯಾಲಯ ಸಂತ್ರಸ್ತ ವಕೀಲರಿಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ, ಜತೆಗೆ ದಂಡದ ಮೊತ್ತವನ್ನು ತಪ್ಪಿತಸ್ಥ ಪೊಲೀಸರಿಂದ ವಸೂಲಿ ಮಾಡುವಂತೆ ನಿರ್ದೇಶನ ನೀಡಿದೆ.ಇದರಿಂದ ಆ ರೀತಿ ಮಾಡುವ ಇತರೆ ಪೊಲೀಸರಿಗೆ ಎಚ್ಚರಿಕೆ ಗಂಟೆಯಾಗಿದೆ. ಪೊಲೀಸರ ಕ್ರಮದ ವಿರುದ್ಧ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ದಕ್ಷಿಣ ಜಿಲ್ಲೆಯ ಪುಂಜಾಲಕಟ್ಟೆಯ ಸಬ್‌ಇನ್ಸ್‌ಪೆಕ್ಟರ್ ಕೆ. ಪಿ. ಸುತೇಶ್ ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ನಡೆಸಲು, ತಮಗೆ ಪರಿಹಾರ ನೀಡಲು ಮತ್ತು ಪ್ರಕರಣ ಕುರಿತು ಇಲಾಖಾ ವಿಚಾರಣೆ ನಡೆಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ಕುಲದೀಪ್ ಅವರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿ ಗಾಯಗೊಳಿದ್ದಾರೆ. ಪ್ರಕರಣ ಕುರಿತ ಪೊಲೀಸ್ ಇಲಾಖೆ ಪ್ರಾಥಮಿಕ ವಿಚಾರಣೆ ಮತ್ತು ಅರ್ಜಿದಾರರು ಸಲ್ಲಿಸಿರುವ ವೈದ್ಯಕೀಯ ದಾಖಲೆಗಳು ಮತ್ತು ಫೋಟೋಗಳಿಂದ ಇದು ದೃಢಪಡುತ್ತದೆ ಎಂದು ಹೇಳಿದೆ. ಅಲ್ಲದೆ, ವಕೀಲ ಕುಲದೀಪ್‌ಗೆ 3 ಲಕ್ಷ ರೂ. ಪರಿಹಾರ ನೀಡಬೇಕು. ಆ ಮೊತ್ತವನ್ನು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವೇತನದಿಂದ ವಸೂಲಿ ಮಾಡಬೇಕು ಎಂದು ಆದೇಶಿಸಿದೆ.
ಒಂದು ತಿಂಗಳಲ್ಲಿ ವರದಿ ಕೊಡಿ: ಅಲ್ಲದೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಈಗಾಗಲೇ ಕೈಗೊಂಡಿರುವ ಇಲಾಖಾ ವಿಚಾರಣೆಯನ್ನು ಪೂರ್ಣಗೊಳಿಸಿ ಒಂದು ತಿಂಗಳ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಜತೆಗೆ ಪ್ರಕರಣ ಕುರಿತು ಪೊಲೀಸರ ಮೇಲೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ವಿಚಾರಣೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಏನಿದು ಪ್ರಕರಣ?: ಕುಲದೀಪ್ ಮತ್ತು ನೆರೆ ಮನೆ ವ್ಯಕ್ತಿಯ ನಡುವೆ ಮನೆಗೆ ಹೋಗುವ ದಾರಿಯ ಮತ್ತು ಗೇಟ್ ವಿಚಾರದಲ್ಲಿ ವ್ಯಾಜ್ಯವಿತ್ತು. ಈ ಸಂಬಂಧ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಮಧ್ಯೆ ನೆರೆಮನೆಯ ವ್ಯಕ್ತಿ ಪೊಲೀಸರಿಗೆ ದೂರು ನೀಡಿ, ವಕೀಲ ಕುಲದೀಪ್ ಮನೆಯ ಗೇಟ್ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸದೇ ಕುಲದೀಪ್ ಅವರನ್ನು ಬಂಧಿಸಿ ಹಲ್ಲೆ ನಡೆಸಲಾಗಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಕುಲದೀಪ್, ಪುಂಜಾಲಕಟ್ಟೆಯ ಸಬ್‌ಇನ್ಸ್‌ಪೆಕ್ಟರ್ ಕೆ. ಪಿ. ಸುತೇಶ್ ತಮ್ಮ ಮೇಲೆ ಕಾನೂನು ಬಾಹಿರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.












Click it and Unblock the Notifications