Karnataka Assembly Elections: ಮಾರ್ಚ್ 9ರಂದು ಸರ್ವಪಕ್ಷಗಳ ಸಭೆ ಕರೆದ ಚುನಾವಣಾ ಆಯೋಗ
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023: ಮಾರ್ಚ್ 9ರಂದು ರಾಜ್ಯದ ರಾಜಕೀಯ ಪಕ್ಷಗಳೊಂದಿಗೆ ಚುನಾವಣಾ ಆಯೋಗ ಮಹತ್ವದ ಸಭೆಯನ್ನು ನಡೆಸಲಿದೆ.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ಪ್ರಬಲ ಪಕ್ಷಗಳು ಭರದ ಸಿದ್ಧತೆಯನ್ನು ನಡೆಸಿವೆ. ಚುನಾವಣೆಗೆ ದಿನಾಂಕ ನಿಗಧಿ ಇನ್ನೂ ಕೂಡ ಆಗಿಲ್ಲ. ಚುನಾವಣಾ ಆಯೋಗ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇದರ ನಡುವೆ ಮಾರ್ಚ್ 9ರಂದು ರಾಜ್ಯದ ರಾಜಕೀಯ ಪಕ್ಷಗಳೊಂದಿಗೆ ಮಹತ್ವದ ಸಭೆಯನ್ನು ನಡೆಸಲಿದೆ.
ಈ ಬಗ್ಗೆ ಚುನಾವಣಾ ಆಯೋಗ ಸೂಚನೆಯನ್ನು ನೀಡಿದೆ. ದಿನಾಂಕ 09-03-2023ರಂದು ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಿದ್ಧತೆಯನ್ನು ಪರಿಶೀಲಿಸಲು, ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ ಎಂದು ತಿಳಿಸಿದೆ. ಈ ವೇಳೆ ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲು ಆಯೋಗ ನಿರ್ಧರಿಸಿದೆ.

ಇದರೊಂದಿಗೆ ಆಯೋಗ ಸಭೆ ನಡೆಸುವ ಸಮಯವನ್ನು ನಿಗಧಿ ಮಾಡಿದೆ. ಪ್ರತೀ ಪಕ್ಷಕ್ಕೂ ಪ್ರತ್ಯೇಕ ಸಮಯವನ್ನು ನಿಗಧಿ ಪಡಿಸಲಾಗಿದೆ. ಮಾರ್ಚ್ 9ರಂದು ಮಧ್ಯಾಹ್ನ 2.30 ರಿಂದ 2.40ರವರೆಗೆ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಜೊತೆಗೆ ಚುನಾವಣಾ ಆಯೋಗ ಸಭೆ ನಡೆಸಲಿದೆ. ಬಳಿಕ 40 ರಿಂದ 2.50ರವರೆಗೆ ಬಹುಜನ ಸಮಾಜ ಪಾರ್ಟಿ ಜೊತೆಗೆ, 2.50 ರಿಂದ 3 ಗಂಟೆಯವರೆಗೆ ಬಿಜೆಪಿ ಪಕ್ಷದೊಂದಿಗೆ, 3ರಿಂದ 3.10ರವರೆಗೆ ಸಿಪಿಎಂ, 3.10 ರಿಂದ 3.20 ಸಿಪಿಎಂ ಮ್ಯಾಕ್ಸಿಸ್, 3.20ರಿಂದ 3.30ರವರೆಗೆ ಕಾಂಗ್ರೆಸ್ ಪಕ್ಷದೊಂದಿಗೆ, 3.30ರಿಂದ 3.40ರವರೆಗೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, 3.40 ರಿಂದ 3.50ರವರೆಗೆ ನ್ಯಾಷನಲ್ ಪೀಪಲ್ಸ್ ಪಾರ್ಟಿ ಹಾಗೂ 3.50 ರಿಂದ 4 ಗಂಟೆಯವರೆಗೆ ಜೆಡಿಎಸ್ ಪಕ್ಷದ ಮುಖಂಡರೊಂದಿಗೆ ಸಭೆಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ನಡೆಸಲಿದ್ದಾರೆ.

ಇನ್ನೂ ಈ ಸಭೆಯ ಬಳಿಕ, ಚುನಾವಣೆಗೆ ದಿನಾಂಕ ಕೂಡ ನಿಗಧಿಯಾಗುವ ಲಕ್ಷಣಗಳು ಇವೆ. ಇದೇ ತಿಂಗಳಿನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ 2023ರ ದಿನಾಂಕವನ್ನು ಘೋಷಿಸೋ ಸಾಧ್ಯತೆ ಇದೆ. ಆ ಬಗ್ಗೆ ಯಾವಾಗ ಎಂಬುದನ್ನು ಚುನಾವಣಾ ಆಯೋಗದ ಘೋಷಣೆಯ ಬಳಿಕ ಖಚಿತಗೊಳ್ಳಲಿದೆ.












Click it and Unblock the Notifications