ಪಂಚರಾಜ್ಯ ಚುನಾವಣೆ 2022: ಸೈಲೆಂಟ್ ಆಗಿ ಉತ್ತರ ಕೊಟ್ಟ ಮತದಾರರು ಎಂದ ತೇಜಸ್ವಿ ಸೂರ್ಯ
ಬೆಂಗಳೂರು, ಮಾರ್ಚ್ 10: ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಮತ್ತು ಗೋವಾ ಎಲ್ಲಾ ಐದು ರಾಜ್ಯಗಳಿಗೆ 2022 ರ ವಿಧಾನಸಭಾ ಚುನಾವಣೆಯ ಎಣಿಕೆ ಪ್ರಕ್ರಿಯೆ ನಡೆದಿದ್ದು, ಬಹುತೇಕ ಚುನಾವಣಾ ಫಲಿತಾಂಶವು ಹೊರಬಿದ್ದಿದೆ. ಈ ನಡುವೆ ಕರ್ನಾಟಕದ ಹಲವು ನಾಯಕರುಗಳು ಈ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಪ್ರದೇಶ, ಉತ್ತರಾಖಂಡ ಬಿಜೆಪಿ ಅಧಿಕಾರವನ್ನು ಪಡೆಯುವುದು ಬಹುತೇಕ ಖಚಿತವಾಗಿದೆ. ಗೋವಾ, ಮಣಿಪುರದಲ್ಲಿ ಬಿಜೆಪಿ ಗದ್ದುಗೆ ಏರಲು ಸಿದ್ಧವಾಗಿದೆ. ಆದರೆ ಪಂಜಾಬ್‌ನಲ್ಲಿ ಎಎಪಿ ಭರ್ಜರಿ ಜಯ ಸಾಧಿಸಲಿದೆ. ಈ ಪಂಚ ರಾಜ್ಯಗಳ ಚುನಾವಣೆಯ ಬಗ್ಗೆ ಪಕ್ಷದ ಕರ್ನಾಟಕದ ಬಿಜೆಪಿ ನಾಯಕರುಗಳು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಬಿಜೆಪಿ ಮತದಾರರು ಸೈಲಂಟ್ ಆಗಿ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಗೆಲುವು ಸಾಧಿಸಿದವರಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

"ಸೈಲೆಂಟ್ ಆಗಿಯೇ ಬಿಜೆಪಿ ಮತದಾರರು ಮತದಾನ ಮಾಡುವ ಮೂಲಕ ದೊಡ್ಡ ಸಂದೇಶ ನೀಡಿದ್ದಾರೆ," ಎಂದು ಹೇಳಿದ್ದಾರೆ. "ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ನಂಬಿಕೆ ನನಗೆ ಈ ಹಿಂದೆಯೇ ಇತ್ತು. ಆದರೆ ಈ ಗೆಲುವು ಬಿಜೆಪಿ ಶ್ರಮವನ್ನು ತೋರಿಸುತ್ತದೆ," ಎಂದು ತಿಳಿಸಿದರು.
"ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಡಬಲ್ ಇಂಜಿನ್ ಸರ್ಕಾರ ನಡೆಸಿದ್ದಾರೆ. ಇವರ ಯಶಸ್ವಿ ನಡೆಗೆ ಜನರೇ ಉತ್ತರ ನೀಡಿದ್ದಾರೆ," ಎಂದು ಹೇಳಿದರು. "ಈ ಹಿಂದೆ ಉ.ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹೊರಗೆ ಬರಲು ಕೂಡಾ ಭಯ ಪಡುತ್ತಿದ್ದರು. ಆದರೆ ಈಗ ಎಲ್ಲ ಜಾತಿ ಮಹಿಳೆಯರಿಗೂ ಬಿಜೆಪಿ ಸರ್ಕಾರ ಬಂದ ಮೇಲೆ ಧೈರ್ಯ ಬಂದಿದೆ," ಎಂದರು.
"ಬಿಜೆಪಿ ಸರ್ಕಾರ ಅಲ್ಲಿನ ಜನರಿಗಾಗಿ ಒಳ್ಳೆಯ ಕೆಲಸವನ್ನು ಮಾಡಿದೆ. ಕೋವಿಡ್ ಸಮಯದಲ್ಲಿಯೂ ಸಹ ಅಲ್ಲಿನ ಜನರಿಗೆ ಯಾವ ರೀತಿ ಸಹಾಯ ಮಾಡಬೇಕು ಅದನ್ನು ಬಿಜೆಪಿ ಮಾಡಿದ್ದೇವೆ," ಎಂದು ಕೂಡಾ ಹೇಳಿದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications