ಕುಂಕುಮ ಕಂಡರೆ ಭಯಪಡುತ್ತಿದ್ದ ಸಿಎಂಗೆ ಈಗ ಭಕ್ತಿ ಬಂದಿದೆ: ಅಶೋಕ್ ವ್ಯಂಗ್ಯ
ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಸಿಲುಕಿದ್ದರು ಸಿದ್ದರಾಮಯ್ಯ. ಇಂದು ಭಾರತವು ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ಪ್ರತ್ಯುತ್ತರ ನೀಡಿದೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಹಣೆಯಲ್ಲಿ ಕುಂಕುಮ ಇಟ್ಟುಕೊಂಡೇ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದಾರೆ. ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೂಡ ವ್ಯಂಗ್ಯವಾಡಿದ್ದಾರೆ. ಆಪರೇಷನ್ ಸಿಂಧೂರ ಯಶಸ್ವಿಯಾಗುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಅವರ ಹಣೆಯಲ್ಲಿ ಸಿಂಧೂರ ಎಂದು ಟಾಂಗ್ ನೀಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದ್ದರು ಎಂದು ಬಿಜೆಪಿ ದೂರಿತ್ತು. ಆದರೆ ಇಂದು ಸಿಂಧೂರ ಆಪರೇಷನ್ ಯಶಸ್ವಿ ಬಗ್ಗೆ ಸುದ್ದಿಗೋಷ್ಠಿಗೆ ಅವರು ಹಣೆಗೆ ಕುಂಕುಮ ಇಟ್ಟು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಕುಂಕುಮ ಕಂಡರೆ ಭಯಪಡುತ್ತಿದ್ದವರಿಗೆ ಈಗ ಭಕ್ತಿ ಬಂದಿದೆ ಅಂದರೆ ಇದಕ್ಕಿಂತ ಅಚ್ಛೆ ದಿನ್ ಬೇಕಾ? ಎಂದು ಅಶೋಕ್ ಸಿಎಂಗೆ ಲೇವಡಿ ಮಾಡಿದ್ದಾರೆ.

ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರುವ ಕಾಲ. ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ಈಗಾಗಲೇ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ನಿರಂತರ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪಾಕ್ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ಭಾರತೀಯ ಸೇನೆ ನಡೆಸಿರುವ ಈ ದಾಳಿಯು ಹತ್ಯಾಕಾಂಡ ನಡೆಸುತ್ತಿದ್ದ ಉಗ್ರಗಾಮಿಗಳಿಗೆ ಕಲಿಸಿದ ತಕ್ಕ ಪಾಠ ಮಾತ್ರವಲ್ಲ, ಈ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡಿ ಭಾರತದ ವಿರುದ್ಧ ಅವರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೂ ನೀಡಿರುವ ಎಚ್ಚರಿಕೆ ಎಂದು ಶ್ಲಾಘಿಸಿದ್ದಾರೆ.
ದೇಶದ ಸೇನಾಪಡೆ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದ್ದು, ನಾವು ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿಯಾಗುವುದಿಲ್ಲ. ಈ ದಾಳಿಯನ್ನು ನಾವೆಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆಯ ಕ್ರಮವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಉಗ್ರರ ನೆಲೆಗಳ ಮೇಲೆ ದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಪಹಲ್ಗಾಮ್ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಗೊತ್ತಿದ್ದರೂ ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡಲಿಲ್ಲ, ಬದಲಿಗೆ ಹಠಮಾರಿ ಧೋರಣೆ ತೋರಿದ ಕಾರಣ ಭಾರತಕ್ಕೆ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications