ಬೆಂಗಳೂರಿಗೆ ಕೇಜ್ರಿವಾಲ್, ಊಟಕ್ಕೆ 20 ಸಾವಿರ ರೂ.!
ಬೆಂಗಳೂರು, ಜ. 1 : ನವದೆಹಲಿಯಲ್ಲಿ ವಿಧಾನಸಭೆ ಚುನಾವಣೆ ಕಾವು ನಿಧಾನವಾಗಿ ಏರುತ್ತಿದೆ. ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಆಗಮಿಸುತ್ತಿದ್ದಾರೆ. 20,000 ರೂ. ಕೊಟ್ಟು ನೀವು ಕೇಜ್ರಿವಾಲ್ ಜೊತೆ ಭೋಜನ ಸವಿಯಬಹುದಾಗಿದೆ.
ಪಕ್ಷಕ್ಕೆ ಪಾರದರ್ಶಕವಾಗಿ ಹಣ ಸಂಗ್ರಹಿಸುವುದು ಸ್ವಚ್ಛ ರಾಜಕೀಯದ ಒಂದು ಭಾಗ ಎಂದು ಆಮ್ ಆದ್ಮಿ ಪಕ್ಷ ನಂಬಿಕೆ ಇಟ್ಟುಕೊಂಡಿದೆ. ಆದ್ದರಿಂದ ಕಳೆದ ಬಾರಿ ಚುನಾವಣೆಯಲ್ಲಿ ಮಾಡಿದಂತೆ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಅರವಿಂದ್ ಕೇಜ್ರಿವಾಲ್ ಪಕ್ಷಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.[ಕೇಜ್ರಿವಾಲ್ ಡಿನ್ನರ್ ನಿಂದ 93 ಲಕ್ಷ ರೂ. ಸಂಗ್ರಹ]

ಬೆಂಗಳೂರಿಗೆ ಅರವಿಂದ್ ಕೇಜ್ರಿವಾಲ್ ಜ.11ರ ಭಾನುವಾರ ಆಗಮಿಸಲಿದ್ದಾರೆ. ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆ ನೀಡುವವರು 20,000 ರೂ.ಗಳನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಣಿ ಮಾಡಿಕೊಂಡವರು, ಜ.11ರಂದು ಕೇಜ್ರಿವಾಲ್ ಜೊತೆ ಊಟ ಸವಿಯಬಹುದಾಗಿದೆ. [3 ಲಕ್ಷ ರು. ಇಟ್ಟು ಕೇಜ್ರಿವಾಲ್ ಜೊತೆ ಊಟ ಮಾಡಿ!]
ಕೇಜ್ರಿವಾಲ್ ಬೆಂಗಳೂರು ಭೇಟಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಮ್ ಆದ್ಮಿ ಪಕ್ಷ ಶುಕ್ರವಾರ ಪತ್ರಿಕಾಗೋಷ್ಠಿ ಕರೆದಿದೆ. ಪಕ್ಷದ ಮುಖಂಡ ಪೃಥ್ವಿ ರೆಡ್ಡಿ, ವಿ.ಬಾಲಕೃಷ್ಣನ್, ಪ್ರೊ.ಬಾಬು ಮ್ಯಾಥ್ಯೂಸ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
93 ಲಕ್ಷ ಸಂಗ್ರಹಣೆ ಮಾಡಿದ್ದರು : ನವೆಂಬರ್‌ನಲ್ಲಿ ಮುಂಬೈನಲ್ಲಿ ಆಪ್ ಡಿನ್ನರ್ ಆಯೋಜನೆ ಮಾಡಿ 93 ಲಕ್ಷ ರೂ. ಸಂಗ್ರಹಿತ್ತು. ಭಾರತ ಮಾತ್ರವಲ್ಲದೇ ಅಮೆರಿಕದಲ್ಲಿಯೂ ಕೇಜ್ರಿವಾಲ್ ಡಿನ್ನರ್ ಆಯೋಜಿಸಿದ್ದರು. ಸದ್ಯ ಬೆಂಗಳೂರಿನ ಸರದಿ.












Click it and Unblock the Notifications