ರಾಜ್ಯಕ್ಕೆ ಅರುಣ್ ಸಿಂಗ್; ಜೂನ್ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ
ಬೆಂಗಳೂರು, ಜೂನ್ 15; ನಾಯತ್ವ ಬದಲಾವಣೆ ಚರ್ಚೆಯ ನಡುವೆಯೇ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬುಧವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಜೂನ್ 18ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರೆಯಲಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಈಗಾಗಲೇ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ ಅರವಿಂದ ಬೆಲ್ಲದ್ ಸೋಮವಾರ ದೆಹಲಿಯಲ್ಲಿ ಹಲವು ನಾಯಕರನ್ನು ಭೇಟಿ ಮಾಡಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಮೂರು ದಿನಗಳ ಭೇಟಿಯಾಗಿ ಅರುಣ್ ಸಿಂಗ್ ಬುಧವಾರ ಸಂಜೆ ಬೆಂಗಳೂರಿಗೆ ಬರಲಿದ್ದಾರೆ. ಬುಧವಾರ ಅವರು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಎರಡನೇ ದಿನ ಶಾಸಕರನ್ನು ಭೇಟಿಯಾಗಲಿದ್ದಾರೆ.

ಯಡಿಯೂರಪ್ಪ ವಿರುದ್ಧ ಕೆಲವು ನಾಯಕರು ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದು, ಅವರೆಲ್ಲರೂ ಅರುಣ್ ಸಿಂಗ್ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ತಯಾರಿ ನಡೆಸಿದ್ದಾರೆ. ಪ್ರತಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಿದ್ದು, ಒಬ್ಬ ಶಾಸಕರಿಗೆ 15 ನಿಮಿಷ ಮಾತನಾಡಲು ಅವಕಾಶ ಕೊಡಲಾಗಿದೆ.
ಕೋರ್ ಕಮಿಟಿ ಸಭೆ; ಹಲವು ಬಿಜೆಪಿ ಶಾಸಕರು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬೇಡಿಕೆ ಇಟ್ಟಿದ್ದಾರೆ. ಕೆಲವು ಸಚಿವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನಗೊಂಡಿದ್ದಾರೆ. ನಾಯಕತ್ವ ಬದಲಾವಣೆ ಮಾಡದಂತೆ ಶಾಸಕರ ಸಹಿ ಸಂಗ್ರಹ ಮಾಡಲಾಗಿದೆ ಎಂಬುದು ಸೇರಿದಂತೆ ಹಲವು ವಿಚಾರಗಳು ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವ ಶಾಸಕರಿಗೆ ಅರುಣ್ ಸಿಂಗ್ ಎಚ್ಚರಿಕೆ ರವಾನಿಸುವ ಸಾಧ್ಯತೆ ಇದೆ. ಹಲವು ಶಾಸಕರು ಬಹಿರಂಗವಾಗಿ ನಾಯಕತ್ವದ ವಿಚಾರದಲ್ಲಿ ಪ್ರತಿದಿನ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ.
ಜೂನ್ 18ರಂದು ರಾಜ್ಯ ಕೋರ್ ಕಮಿಟಿ ಸಭೆ ಅರುಣ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ರಾಮನಗರದಲ್ಲಿ ಮಾತನಾಡಿದ್ದಾರೆ. "ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಬುಧವಾರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬರುತ್ತಿದ್ದಾರೆ. 3 ದಿನಗಳ ಕಾಲ ರಾಜ್ಯದಲ್ಲೇ ಇದ್ದು ಮಾತುಕತೆ ನಡೆಸುತ್ತಾರೆ. ಎಲ್ಲವೂ ಫೈನಲ್ ಆಗುತ್ತದೆ. ಏನೂ ತೊಂದರೆ ಇಲ್ಲ. ಯಾರೆದೇ ಅಹವಾಲು ಇದ್ದರೂ 100ಕ್ಕೆ 100ರಷ್ಟು ಎಲ್ಲವೂ ಪರಿಹಾರ ಕಾಣುತ್ತದೆ" ಎಂದು ಹೇಳಿದ್ದಾರೆ.
ಬುಧವಾರದಿಂದ ಕರ್ನಾಟಕ ಬಿಜೆಪಿ ಹಲವಾರು ವಿದ್ಯಮಾನಗಳಿಗೆ ಸಾಕ್ಷಿಯಾಗಲಿದೆ. ರಾಜ್ಯ ಬಿಜೆಪಿ ಉಸ್ತುವಾರಿಗಳು ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವವರ ಹೇಳಿಕೆಗೆ ಕಡಿವಾಣ ಹಾಕಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications