ಗ್ಯಾರಂಟಿ ಯೋಜನೆ ಹೊಗಳಿ ಲೇಖನ ಪ್ರಕಟಿಸಿದ ಆಕ್ಸ್‌ಫರ್ಡ್ ಯೂನಿವರ್ಸಿಟಿ: ಲಿಂಕ್ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು, ಆಗಸ್ಟ್ 19: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳನ್ನು ಹೊಗಳಿ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಮಾನವ ಹಕ್ಕುಗಳ ವೇದಿಕೆ ತನ್ನ ವೆಬ್ಸೈಟ್ನಲ್ಲಿ ಲೇಖನ ಪ್ರಕಟಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ( ಈಗಿನ X ಕಂಪನಿ ) ಮಾಡಿದೆ. ಈ ಲೇಖನದ ಲಿಂಕ್ ಅನ್ನು ಟ್ವೀಟ್‌ನಲ್ಲಿ ನೀಡಿದೆ.
'ಜಗತ್ತಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಮಾನವ ಹಕ್ಕುಗಳ ವೇದಿಕೆಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಶ್ಲಾಘಿಸಿ ತನ್ನ ವೆಬ್ಸೈಟ್ನಲ್ಲಿ ಲೇಖನ ಪ್ರಕಟಿಸಿದೆ. ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆಗಳು ಸಮಾಜ ಕಲ್ಯಾಣದ ಯೋಜನೆಗಳಾಗಿದ್ದರೂ ಪರಿಸರ ಹಾಗೂ ಹವಾಮಾನ ಸುಧಾರಣೆಯ ಅನುಕೂಲತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷತೆ ಹೊಂದಿದೆ ಈ ಲೇಖನ. ನಮ್ಮ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಗಮನ ಸೆಳೆಯುತ್ತಿವೆ' ಎಂದು ಕೆಪಿಸಿಸಿ ಹೇಳಿದೆ.

ಶೇ 40 ಕಮಿಷನ್: ತನಿಖಾ ಸಮಿತಿ ರಚನೆ
40 ಪರ್ಸೆಂಟ್ ಕಮಿಷನ್ ಕುರಿತು ತನಿಖೆ ನಡೆಸಲು ತನಿಖಾ ಸಮಿತಿಯನ್ನು ರಚಿಸಿದ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ. 'ಬಿಜೆಪಿಯ ಶೇ 40 ಕಮಿಷನ್ ಲೂಟಿಯ ಆರೋಪವನ್ನು ಕೇವಲ ಆರೋಪ, ಸಾಕ್ಷಿ ಎಲ್ಲಿದೆ ಎನ್ನುತ್ತಿದ್ದರು ಬಿಜೆಪಿ ನಾಯಕರು. ಕಮಿಷನ್ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದೆ ನಮ್ಮ ಸರ್ಕಾರ. ಸಾಕ್ಷಿ, ಪುರಾವೆ ಕೇಳುತ್ತಿದ್ದವರಿಗೆ ತನಿಖೆಯ ನಂತರ ಉತ್ತರ ಸಿಗಲಿದೆ, ಉತ್ತರವಷ್ಟೇ ಅಲ್ಲ ಶಿಕ್ಷೆಯೂ ಸಿಗಲಿದೆ' ಎಂದು ಹೇಳಿದೆ.
ಮೊಟ್ಟೆ ಬಾಳೆಹಣ್ಣು ಯೋಜನೆಗೆ ಚಾಲನೆ
'ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿ ಮೊಟ್ಟೆ ಬಾಳೆಹಣ್ಣು ನೀಡುವ ಯೋಜನೆಗೆ ಚಾಲನೆ ದೊರಕಿದೆ. ಸದೃಢ ಪ್ರಜೆಗಳನ್ನು ರೂಪಿಸಿದಾಗ ಮಾತ್ರ ಸದೃಢ ಕರ್ನಾಟಕವನ್ನು ನಿರ್ಮಿಸಲು ಸಾಧ್ಯ ಎಂಬ ನಂಬಿಕೆಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಮೊಟ್ಟೆ ಖರೀದಿಯಲ್ಲಿ ಲೂಟಿ ಮಾಡಿದ್ದು ಬಿಟ್ಟರೆ ಅಪೌಷ್ಟಿಕತೆಯ ನಿವಾರಣೆಗೆ ಹಿಂದಿನ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ, ಜನಪರ ಯೋಜನೆ ರೂಪಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯ್ತು' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.

'ಇಂದಿನ ಮಕ್ಕಳೇ ಕರ್ನಾಟಕದ ಭವಿಷ್ಯದ ಆಸ್ತಿ, ಮಕ್ಕಳ ಶಿಕ್ಷಣ ಹಾಗೂ ಪೌಷ್ಟಿಕತೆಯ ಉತ್ತೇಜನಕ್ಕೆ ಕಾಂಗ್ರೆಸ್ ಸರ್ಕಾರ ಹಲವು ಪೂರಕ ಕ್ರಮಗಳನ್ನು ಕೈಗೊಂಡಿದೆ. 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಾಗೂ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಜನಪರ ಯೋಜನೆಗಳ ಸದ್ದು ಸುದ್ದಿಯೇ ಇರಲಿಲ್ಲ, ಜನರ ಪರವಾಗಿ ಕೆಲಸ ಮಾಡಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯ್ತು' ಎಂದು ಹೇಳಿದೆ.












Click it and Unblock the Notifications