ಅರ್ನಬ್ ಬಂಧನ; ಬಿಜೆಪಿಗೆ ದಿನೇಶ್ ಗುಂಡೂರಾವ್ ಟ್ವೀಟ್ ಬಾಣ!
ಬೆಂಗಳೂರು, ನವೆಂಬರ್ 04 : ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಇದಾಗಿದೆ ಎಂದು ಹಲವಾರು ಬಿಜೆಪಿ ನಾಯಕರು ಟ್ವೀಟ್ ಮೂಲಕ ಖಂಡಿಸಿದ್ದಾರೆ.
ರಿಪಬ್ಲಿಕ್ ಟಿವಿಯ ಮುಖ್ಯಸ್ಥ, ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನದ ಕುರಿತು ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಸಹ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
"ಅರ್ನಬ್ ಗೋಸ್ವಾಮಿ ಬಂಧನ ಜೈ ಶಂಕರ್ ಅವರಿಗೆ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂಬುದಾದರೆ, ಅವರದ್ದೇ ಪಕ್ಷದ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಗನ ಭ್ರಷ್ಟಾಚಾರ ಬಿಚ್ಚಿಟ್ಟ ಪವರ್ ಟಿವಿಯನ್ನು ಪೊಲೀಸ್ ಬಲ ಪ್ರಯೋಗಿಸಿ ಎರಡು ವಾರ ಮುಚ್ಚಿಸಿದ್ದು ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ?" ಎಂದು ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಟಿವಿ ನೇರ ಪ್ರಸಾರ ಮಾಡಲು ಬೇಕಾದ ಕಂಪ್ಯೂಟರ್‌ಗಳನ್ನು ತೆಗೆದುಕೊಂಡು ಹೋಗಿದ್ದರು. ಆಗ ಸುಮಾರು 1 ವಾರಗಳ ಕಾಲ ಪವರ್ ಟಿವಿ ಪ್ರಸಾರ ಸ್ಥಗಿತಗೊಂಡಿತ್ತು.
#ArnabGoswami ಬಂಧನ ವಿದೇಶಾಂಗ ಸಚಿವ @DrSJaishankar ರವರಿಗೆ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂಬುದಾದರೆ, ಅವರದ್ದೇ ಪಕ್ಷದ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಮಗನ ಭ್ರಷ್ಟಾಚಾರ ಬಿಚ್ಚಿಟ್ಟ 'ಪವರ್ ಟಿವಿ'ಯನ್ನು ಪೊಲೀಸ್ ಬಲ ಪ್ರಯೋಗಿಸಿ ಎರಡು ವಾರ ಮುಚ್ಚಿಸಿದ್ದು ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ..? pic.twitter.com/ZQ2ZEd2sb0
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 4, 2020
ಪವರ್ ಟಿವಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಸುದ್ದಿ ಪ್ರಸಾರ ಮಾಡಿತ್ತು. ಅದಕ್ಕಾಗಿ ಪೊಲೀಸರಿಂದ ದಾಳಿ ಮಾಡಿಸಿ ಪ್ರಸಾರ ನಿಲ್ಲಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಬುಧವಾರ ಅರ್ನಬ್ ಗೋಸ್ವಾಮಿ ಬಂಧನವಾಗುತ್ತಿದ್ದಂತೆ ವಿವಿಧ ಕೇಂದ್ರ ಸಚಿವರು ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಶಿವಸೇನೆ ನೇತೃತ್ವದ ಮೈತ್ರಿಕೂಟದ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಾನಿ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ.












Click it and Unblock the Notifications