ನಟಿ ಶೃತಿಹರಿಹರನ್ ಆಕ್ಷೇಪಣೆ ಇಲ್ಲ: ಅರ್ಜುನ್ ಸರ್ಜಾಗೆ ಕೋರ್ಟ್‌ನಿಂದ ಮುಕ್ತಿ!
ಬೆಂಗಳೂರು, ಡಿ. 11: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ "ಮೀಟೂ" ಆರೋಪ ಪ್ರಕರಣ ತನಿಖೆ ನಡೆಸಿದ ಕಬ್ಬನ್ ಪಾರ್ಕ್ ಪೊಲೀಸರು ಬಿ ವರದಿಯನ್ನು ಎಂಟನೇ ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ. ನಟ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪದಿಂದ ಸಂಪೂರ್ಣ ಮುಕ್ತವಾಗಿದ್ದಾರೆ. ದೂರುದಾರೆ ಶೃತಿ ಹರಿಹರನ್ ಪೊಲೀಸರ ಬಿ ವರದಿಗೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಆದರೆ, ಯಾವುದೇ ಆಕ್ಷೇಪಣೆ ಸಲ್ಲಿಸದ ಕಾರಣ ಪೊಲೀಸರು ಸಲ್ಲಿಸಿದ್ದ ವರದಿಯನ್ನು ನ್ಯಾಯಾಲಯ ಅಂಗೀಕರಿಸಿದೆ.
ನಟಿ ಶೃತಿ ಹರಿಹರನ್ ಆರೋಪ:
ನಾನು ವೃತ್ತಿಯಲ್ಲಿ ಚಿತ್ರನಟಿಯಾಗಿದ್ದು, ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿದ್ದು, 2015 ರಲ್ಲಿ ಅರ್ಜುನ್ ಸರ್ಜಾ ರವರೊಂದಿಗೆ ವಿಸ್ಮಯ ಎಂಬ ಹೆಸರಿನ ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರದ ಶೂಟಿಂಗ್ ಹೆಬ್ಬಾಳದ ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ವೇಳೆಯಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗವನ್ನು ಮುಟ್ಟಿ, ನನ್ನ ಬ್ರಾ ಅನ್ನು ಹಿಡಿದು ಎಳೆದು ನಂತರ ತೊಡೆಯ ಮೇಲೆ ಕೈಯಾಡಿಸಿದ್ದರು. ಅವರ ಈ ರೀತಿಯ ವರ್ತನೆಯ ಬಗ್ಗೆ ಬೇಜಾರಾಗಿದ್ದು, ಆಗ ತಾನೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನೂ ಮಾಡದೇ ಸುಮ್ಮನಾದೆ. ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೆಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾ ಎಂದು ಹೇಳಿದ್ದು, ಇದರಿಂದ ನನಗೆ ಬೇಜಾರಾಗಿತ್ತು.
ಈ ವಿಷಯವನ್ನು ನನ್ನೊಂದಿಗಿದ್ದ ಬೋರೆಗೌಡ ಮತ್ತು ಕಿರಣ್ ರವರಿಗೆ ತಿಳಿಸಲಾಗಿ ಅವರು ಸಮಾಧಾನ ಪಡಿಸಿದರು. 2015 ಡಿಸೆಂಬರ್‌ನಲ್ಲಿ ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಶೂಟಿಂಗ್ ವೇಳೆ ಖಾಸಗಿ ಸ್ಥಳದಲ್ಲಿ ಪ್ರತ್ಯೇಕವಾಗಿ ಇರೋಣ ಎಂದು ಕರೆದಿದ್ದರು. ಅದಕ್ಕೆ ನಾನು ನಿರಾಕರಿಸಿದ್ದೆ. ಆ ಬಳಿಕ 2016, ಜು. 18 ರಂದು ಯು.ಬಿ. ಸಿಟಿ ಶೂಟಿಂಗ್ ಮುಗಿದು ಲಾಬಿಯಲ್ಲಿ ಕೂತಿದ್ದ ವೇಳೆ ಅರ್ಜುನ್ ಸರ್ಜಾ ನನ್ನನ್ನು ರೂಮ್‌ಗೆ ಕರೆದಿದ್ದರು. ಒಬ್ಬರೇ ಯಾಕೆ ಕರೆಯುತ್ತಿದ್ದೀರಾ ಎಂದರೆ, ಕೈ ಹಿಡಿದು ರೂಮಿಗೆ ಎಳೆಯಲು ಯತ್ನಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಒಂದು ದಿನ ನೀನೇ ಬರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ದ ಗಂಭೀರ ಆರೋಪ ಮಾಡಿದ್ದರು.

ಈ ಪ್ರಕರಣವನ್ನು ತನಿಖೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದ್ದರು. ನಟಿ ಶೃತಿ ಹರಿಹರನ್ ಮಾಡಿದ್ದ ಅರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ನಟಿ ಶೃತಿ ಹರಿಹರನ್ ಆರೋಪ ಸಮರ್ಥಿಸುವ ಸಿಸಿಟಿವಿ ಫೂಟೇಜ್ ಸಿಕ್ಕಿಲ್ಲ, ಸಾಕ್ಷಿದಾರರು ಹೇಳಿಕೆಯಲ್ಲಿ ದಾಖಲಿಸಿಲ್ಲ. ಹೀಗಾಗಿ ದೊಡ್ಡ ವಿವಾದ ಹುಟ್ಟು ಹಾಕಿದ್ದ ಮೀಟೂ ಪ್ರಕರಣ ತನಿಖೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಬಿ ವರದಿ ಸಲ್ಲಿಸಿದ್ದರು.

ಮೀಟೂ ಪ್ರಕರಣ: 27, ಅಕ್ಟೋಬರ್ 2018 ರಂದು ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಶ್ವದಲ್ಲಿ ಮೀಟೂ ಅಭಿಯಾನ ಶುರುವಾಗಿತ್ತು. ಬಾಲಿವುಡ್, ಕಾಲಿವುಡ್‌ನ ನಟಿಮಣಿಯರು ತಮ್ಮ ಜೀವನದಲ್ಲಿ ಆದ ಮೀಟು ಅನುಭವ ಸಮಾಜದ ಮುಂದೆ ತೆರೆದಿಟ್ಟಿದ್ದರು. 2015 ರಲ್ಲಿ ವಿಸ್ಮಯ ಸಿನಿಮಾ ಶೂಟಿಂಗ್ ವೇಳೆ ನಡೆದಿದ್ದ ಘಟನೆ ಆಧರಿಸಿ ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಹೊರಿಸಿದ್ದರು. ಅದ್ಯಾಕೋ ಇದು ಪೊಲೀಸ್ ಠಾಣೆ ಮೆಟ್ಟಿಲೇರಿತು. ನಟಿ ಶೃತಿ ಹರಿಹರನ್ ಮಾಡಿದ್ದ ಅರೋಪ ಕುರಿತು ನಟ ಅರ್ಜುನ್ ಸರ್ಜಾ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಅಂತಿಮ ತನಿಖೆ ಬಳಿಕ ಬಿ ವರದಿ ಸಲ್ಲಿಕೆ:
ತನಿಖಾ ವಿಷಯವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿರುತ್ತೇನೆ. ಈ ಪ್ರಕರಣದಲ್ಲಿ ನೊಂದ ಯುವತಿ ಶೃತಿ ಹರಿಹರನ್‌ರವರು ಒಬ್ಬರು ಚಲನಚಿತ್ರ ನಟಿಯಾಗಿದ್ದು, ಅನೇಕ ಕನ್ನಡ, ತಮಿಳು, ತೆಲಗು ಚಿತ್ರಗಳಲ್ಲಿ ನಟಿಸಿರುತ್ತಾರೆ. 2015 ನೇ ಸಾಲಿನಲ್ಲಿ ಉಮಾಶಂಕರ್ ರವರು ನಿರ್ಮಿಸಿರುವ, ಅರುಣ್ ವೈದ್ಯನಾಥನ್ ರವರು ನಿರ್ದೇಶಿಸಿರುವ 'ವಿಸ್ಮಯ' ಸಿನೆಮಾದಲ್ಲಿ ನಾಯಕ ನಟಿಯಾಗಿ, ನಾಯಕ ನಟನಾದ ಅರ್ಜುನ್ ಸರ್ಜಾ ರವರೊಂದಿಗೆ ನಟಿಸಿರುತ್ತಾರೆ. ಈ ಚಿತ್ರದ ಶೂಟಿಂಗ್ ಹೆಬ್ಬಾಳದ ರೆಸಿಡೆನ್ಸಿ ಕಾಲೇಜಿನಲ್ಲಿ ನಡೆಯುತ್ತಿದ್ದ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ವೇಳೆಯಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗವನ್ನು ಕೈಯಿಂದ ಮುಟ್ಟಿ, ನನ್ನ ಬ್ರಾ ಅನ್ನು ಹಿಡಿದು ಎಳೆದು ನಂತರ ತೊಡೆಯ ಮೇಲೆ ಕೈಯಾಡಿಸಿದ್ದು, ಆಗ ನನಗೆ ಅವರ ಈ ರೀತಿಯ ವರ್ತನೆಯ ಬಗ್ಗೆ ಬೇಜಾರಾಗಿದ್ದು, ಆಗ ತಾನೆ ನಾನು ಇಂಡಸ್ಟ್ರಿಯಲ್ಲಿ ಗುರ್ತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನು ಮಾಡದೇ ಸುಮ್ಮನಾಗಿದ್ದು, ನಂತರ ಪುನಃ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೆಲ್ಲಾ ಕೈಯಾಡಿಸಿ ನಮ್ಮ ಡೈರೆಕ್ಟರ್ ಬಳಿ ದೃಶ್ಯಾವನ್ನು ಈ ರೀತಿ ಇನ್ನು ಸುಧಾರಣೆ ಮಾಡಿಕೊಳ್ಳಬಹುದಲ್ಲಾ ಎಂದು ಹೇಳಿದ್ದು, ಇದರಿಂದ ನನಗೆ ಬೇಜಾರಾಗಿದೆ. ಈ ವಿಷಯವನ್ನು ನನ್ನೊಂದಿಗಿದ್ದ ಬೋರೆಗೌಡ ಮತ್ತು ಕಿರಣ್ ರವರಿಗೆ ತಿಳಿಸಲಾಗಿ ಅವರು ಸಮಾಧಾನ ಪಡಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ.

Recommended Video
ದೇವನಹಳ್ಳಿಯ ಆಸ್ಪತ್ರೆಯೊಂದರ ಶೂಟಿಂಗ್ ವೇಳೆ ನನ್ನನ್ನು ಮೇಲಿಂದ ಮೇಲೆ ಶೂಟಿಂಗ್ ನಂತರ ಈ ದಿನ ಪೂರ್ತಿ ಸಮಯವಿದೆ. ಖಾಸಗಿ ಸ್ಥಳದಲ್ಲಿ ಪ್ರತ್ಯೇಕವಾಗಿ ಇರೋಣ ಎಂದು ಕರೆದಿದ್ದರು. ನಾನು ನಿರಾಖರಿಸಿದ್ದೆನು. ನಂತರ ಯು.ಬಿ. ಸಿಟಿಯಲ್ಲಿ ಶೂಟಿಂಗ್ ಆಗಿ ಲಾಬಿಯಲ್ಲಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಅರ್ಜುನ್ ಸರ್ಜಾ ನನ್ನ ಬೆನ್ನನ್ನು ಗಟ್ಟಿಯಾಗಿ ಹಿಡಿದು ಒಬ್ಬರೇ ಏಕೆ ಕಾಯುತ್ತಿದ್ದಿರಾ, ನನ್ನ ರೂಮಿಗೆ ಬರಬಹುದಿತ್ತಲ್ಲ ಎಂದು ಹೇಳಿದ್ದರು. ಅದಕ್ಕೆ ನಾನು ಬರುವುದಿಲ್ಲ ಎಂದಿದ್ದಕ್ಕೆ ಒಂದು ದಿನ ನೀನೆ ಬರುವಂತೆ ಮಾಡುತ್ತೇನೆ. ಎಚ್ಚರದಿಂದಿರು ಎಂದರು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಬೇರೆ ಬೇರೆ ಜಾಗಗಳಿಗೆ ಎಳೆಯುತ್ತೇನೆ ಮತ್ತು ನಿನ್ನ ಜೀವನ ನರಕಯಾತನೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದರು. ಇತ್ತೀಚಿನ ದಿನಗಳಲ್ಲಿ ಮೀ ಟೂ ಅಭಿಯಾನದಡಿಯಲ್ಲಿ ತಾನೂ ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿ ತನ್ನ ಮೂರು ವರ್ಷ ಹಿಂದಿನ ಘಟನೆಯನ್ನು ನೆನಪಿಸಿಕೊಂಡು ದೂರು ನೀಡಿದ್ದಾರೆ ಎಂಬುದು ಪೊಲೀಸ್ ತನಿಖೆಯ ತಿರುಳು.












Click it and Unblock the Notifications