ವಿಜಯೇಂದ್ರ ವಿರುದ್ಧ ರೆಬೆಲ್ ಆದ ಮತ್ತೊಬ್ಬ ಬಿಜೆಪಿ ನಾಯಕ
ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಬಹುತೇಕ ದಟ್ಟವಾಗಿದೆ. ವಿಜಯೇಂದ್ರ ಅವರ ವಿರುದ್ಧ ದಿನಕ್ಕೊಬ್ಬ ನಾಯಕರು ರೆಬೆಲ್ ಆಗುತ್ತಿದ್ದು, ರಾಜ್ಯಾಧ್ಯಕ್ಷ ಸ್ಥಾನದಿಂದ ಕೂಡಲೇ ಅವರನ್ನು ಇಳಿಸುವಂತೆ ಹೈಕಮಾಂಡ್‌ಗೆ ಪಟ್ಟು ಹಿಡಿಯುತ್ತಾರೆ. ಇದೀಗ ಬಿಜೆಪಿಯ ಮತ್ತೊಬ್ಬ ಪ್ರಭಾವಿ ನಾಯಕ ಕೂಡ ವಿಜಯೇಂದ್ರ ವಿರುದ್ಧ ಸಿಡಿದಿದ್ದಾರೆ.
ಬಿಜೆಪಿ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ವಿಜಯೇಂದ್ರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಖುದ್ದಾಗಿ ಭೇಟಿಯಾಗಿ ವಿಜಯೇಂದ್ರ ಅವರನ್ನು ಕೂಡಲೇ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಎಂದು ಕೇಳಿಕೊಂಡಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.

ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಅರವಿಂದ ಲಿಂಬಾವಳಿ ಅವರು ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಇದೇ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಕೂಡಲೇ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಿ ಎಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದಾಗಿ ಜೆ.ಪಿ.ನಡ್ಡಾ ಕೂಡ ಹೇಳಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಶಾಸಕರ ಮಾತಿಗೂ ವಿಜಯೇಂದ್ರ ಬೆಲೆ ಕೊಡಲ್ಲ. ಯಾವುದೇ ಹೋರಾಟವನ್ನು ಅವರು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ. ಅವರು ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದು, ಪಕ್ಷ ಸಂಘಟನೆಯಾಗುತ್ತಿಲ್ಲ. ಇತ್ತೀಚೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಗೊಂದಲಗಳಾಗಿವೆ. ವಿಜಯೇಂದ್ರ ತನ್ನ ಆಪ್ತರಿಗೆ ಮಣೆ ಹಾಕಿದ್ದಾರೆ ಎಂದು ದೂರಿನ ಪಟ್ಟಿ ಕೊಟ್ಟಿದ್ದಾರಂತೆ.
ಈ ಎಲ್ಲವನ್ನೂ ಜೆ.ಪಿ.ನಡ್ಡಾ ಅವರು ಸೂಕ್ಷ್ಮವಾಗಿ ಆಲಿಸಿದ್ದಾರೆ. ಅಲ್ಲದೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ. ಶೀಘ್ರದಲ್ಲೇ ಎಲ್ಲ ಸಮಸ್ಯೆಗಳನ್ನು ಹೈಕಮಾಂಡ್ ನಾಯಕರು ಪರಿಹರಿಸಲಿದ್ದಾರೆ ಎಂದು ನಡ್ಡಾ ಅವರು ಅರವಿಂದ ಲಿಂಬಾವಳಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಬಿಜೆಪಿಯಲ್ಲಿ ದಿನಕ್ಕೊಬ್ಬರು ನಾಯಕರು ವಿಜಯೇಂದ್ರ ಅವರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆ ವಿಜಯೇಂದ್ರ ಅವರಿಗೆ ಮತ್ತೆ ರಾಜ್ಯಾಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಪದೇ ಪದೇ ವಿಜಯೇಂದ್ರ ಅವರ ಮೇಲೆಯೇ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಪೆಟ್ಟಾಗುವ ಆತಂಕ ಎದುರಾಗಿದೆ. ಈ ಕಾರಣದಿಂದ ಹೈಕಮಾಂಡ್ ಕೂಡ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಉದ್ದೇಶ ಹೊಂದಿಲ್ಲ ಎಂದು ಬಿಜೆಪಿಯಲ್ಲೇ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಕೂಡ ವಿಜಯೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುವ ಮೂಲಕ ಮಾಧ್ಯಮಗಳ ಮುಂದೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ವಿಜಯೇಂದ್ರ ಅವರ ಬಗ್ಗೆ ಹೈಕಮಾಂಡ್ ನಾಯಕರಿಗೆ ದೂರು ಕೊಡುವುದಾಗಿಯೂ ಹೇಳಿದ್ದರು. ಇದರ ನಡುವೆ ಅರವಿಂದ ಲಿಂಬಾವಳಿ ಕೂಡ ವಿಜಯೇಂದ್ರ ವಿರುದ್ಧ ರೆಬೆಲ್ ಆಗಿ ಸಂಚಲನ ಸೃಷ್ಟಿಸಿದ್ದಾರೆ.












Click it and Unblock the Notifications