ನಿಗಮ ಮಂಡಳಿ ನೇಮಕದಿಂದ ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಜನವರಿ 27: ನಿಮಗ ಮಂಡಳಿ ನೇಮಕದಿಂದ ಕೈ ಪಾಳಯದಲ್ಲಿ ಅಸಮಾಧಾನ ಭುಗಿಲೆದಿದೆ. ನಿಗಮ ಮಂಡಳಿಯ ನೇಮಕ ವಿಚಾರದಲ್ಲಿ ಸಚಿವರುಗಳು ತಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಬಹಿರಂಗಾಗಿ ಹೇಳಿಕೆ ನೀಡಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ ಕೆ ಶಿವಕುಮಾರ್, ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ, ಸುದೀರ್ಘ ಚರ್ಚೆ ಬಳಿಕವೇ ನಿಗಮ, ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಈ ನೇಮಕದ ಬಗ್ಗೆ ಸಿದ್ದರಾಮಯ್ಯ ಅವರು, ನಾನು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕೂತು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯವನ್ನು ಪಡೆದಿದ್ದೇವೆ. ಕೆಲವರು ಇಂತಹವರಿಗೆ ಸ್ಥಾನ ನೀಡಬೇಕು ಎಂಬ ಪಟ್ಟಿ ಕೊಟ್ಟಿದ್ದಾರೆ. ಆ ಪತ್ರವನ್ನು ನಿಮ್ಮ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮಂತ್ರಿ ಆಗಬೇಕು, ದೊಡ್ಡ ಮಂಡಳಿಗಳು ಸಿಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಎರಡು ವರ್ಷಗಳ ನಂತರ ಮತ್ತೆ ಬದಲಾವಣೆ ಆಗುತ್ತದೆ. ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದೇವೆ. ಪಕ್ಷ ಯಾವುದೇ ಹುದ್ದೆ ಕೊಟ್ಟರು ಸೇವೆ ಮಾಡಬೇಕು. ಯಾರೂ ಗಾಬರಿಯಾಗುವ ಅವಶ್ಯಕತೆಯಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ನಲ್ಲಿ ದುಡಿದಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುತ್ತೇವೆ.
ಈಗ 39 ಜನ ಶಾಸಕರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಚುನಾವಣಾ ಸಮಯದಲ್ಲಿ ಕೆಲವರಿಗೆ ಮಾತು ಕೊಡಲಾಗಿತ್ತು. ಅದರಂತೆ ಒಂದಷ್ಟು ಜನರಿಗೆ ಹುದ್ದೆ ನೀಡಲಾಗಿದೆ. ಎಲ್ಲರನ್ನೂ ತೃಪ್ತಿ ಪಡಿಸಿದ್ದೇವೆ ಎಂದು ಹೇಳುವುದಿಲ್ಲ. ಪ್ರತಿ ಕ್ಷೇತ್ರದಲ್ಲಿ ಇಬ್ಬರು, ಮೂವರು ಆಕಾಂಕ್ಷಿಗಳಿದ್ದರು. ಪ್ರಸ್ತುತ ಕೆಲವರಿಗೆ ಅವಕಾಶ ನೀಡಲಾಗಿದೆ. ಮುಂದೆ ಉಳಿದವರಿಗೆ ಅವಕಾಶ ಕಲ್ಪಿಸಲಾಗುವುದು. ನಾವು ಎಲ್ಲರನ್ನೂ ಗೌರವಿಸಿ ಕೆಲಸ ಮಾಡಿದ್ದೇವೆ, ಮಾಡುತ್ತೇವೆ.
ಇನ್ನೂ ನೂರಾರು ಕಾರ್ಯಕರ್ತರಿಗೆ ಅವಕಾಶ ನೀಡಲು ಹುದ್ದೆಗಳನ್ನು ಸೃಷ್ಟಿ ಮಾಡಿದ್ದೇವೆ. ಕಾರ್ಯಕರ್ತರಿಗೆ ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆ ಸಮಿತಿ, ಬಗರ್ ಹುಕುಂ ಸಾಗುವಳಿ ಸಮಿತಿ, ಆಶ್ರಯ ಸಮಿತಿ, ಮುನಿಸಿಪಾಲಿಟಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಅವಕಾಶ ನೀಡಲಾಗುವುದು.
ಕ್ರೀಡಾ ಪ್ರಾಧಿಕಾರಕ್ಕೆ ಸಚಿವರೆ ಅಧ್ಯಕ್ಷರಾಗಿರುತ್ತಾರೆ ಎಂದು ಬೈಲಾ ಮಾಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಬೈಲಾ ಮಾಡಲಾಗಿತ್ತು. ಈಗ ಮತ್ತೆ ಪರಿಷ್ಕರಿಸಲಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಮರು ಆಯ್ಕೆ ಮಾಡಿ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಬಗ್ಗೆ ಕೇಳಿದಾಗ "ಆ ವಿಚಾರ ನನಗೆ ಗೊತ್ತಿಲ್ಲ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಕ್ಷೇತ್ರದಲ್ಲಿ ಗೆಲ್ಲುತ್ತದೆ. ಶಿವಮೊಗ್ಗದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಲಿದ್ದಾರೆ ಎಂದರು. ಜಗದೀಶ್ ಶೆಟ್ಟರ್ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ನಿರ್ನಾಮ ಮಾಡಿ ಎಂದು ಕರೆಕೊಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕಾಂಗ್ರೆಸ್ ಗೆಲ್ಲಿಸಿ, ಬಿಜೆಪಿ ನಿರ್ನಾಮ ಮಾಡಿ ಎಂದು ಹೇಳಿದ್ದರು ಎಂದು ಕುಹಕವಾಡಿದರು.












Click it and Unblock the Notifications