ಲೇಬರ್ ಕೋರ್ಟ್ ನೇಮಕಾತಿ; ಕೇಂದ್ರಕ್ಕೆ ಹೈಕೋರ್ಟ್ ತರಾಟೆ
ಬೆಂಗಳೂರು, ಅಕ್ಟೋಬರ್ 26; ಬೆಂಗಳೂರು ನಗರದಲ್ಲಿರುವ ಕೇಂದ್ರ ಸರ್ಕಾರದ ಕೈಗಾರಿಕಾ ನ್ಯಾಯಾಧೀಕರಣ (ಲೇಬರ್ ಕೋರ್ಟ್‌ಗೆ) ಪೀಠಾಸೀನಾಧಿಕಾರಿಯ ನೇಮಕ ವಿಚಾರದಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಮುಂದಿನ ಮೂರು ವಾರಗಳಲ್ಲಿ ಈ ಸಂಬಂಧ ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ 10 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಈ ಸಂಬಂಧ ಕೈಗಾರಿಕಾ ಕಾನೂನು ಅಭ್ಯಸಕಾರರ ವೇದಿಕೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಕೇಂದ್ರ ಸರ್ಕಾರದ ಪರ ವಕೀಲರು, ಕೈಗಾರಿಕಾ ನ್ಯಾಯಾಧೀಕರಣಕ್ಕೆ ಪೀಠಾಸೀನಾಧಿಕಾರಿಯನ್ನು 2022ರ ಆ.18ರಂದು ನೇಮಕ ಮಾಡಲಾಗಿತ್ತು. ಆದರೆ, ಅವರು ಅಧಿಕಾರ ವಹಿಸಿಕೊಂಡಿಲ್ಲ. ಹೀಗಾಗಿ ಹೊಸ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆ ಪ್ರಕ್ರಿಯೆ ಕೇಂದ್ರದ ಪರಿಶೀಲನೆಯಲ್ಲಿದ್ದು, ಎರಡು ವಾರ ಕಾಲಾವಕಾಶ ನೀಡಿದರೆ ವರದಿ ಸಲ್ಲಿಸಲಾಗುವುದು ಎಂದು ವಾದಿಸಿದರು.
ನ್ಯಾಯ ಪಡೆಯುವವರಿಗೆ ತೊಂದರೆ; ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರರು ಹೇಳುವಂತೆ ಕಳೆದ ಮೂರು ವರ್ಷಗಳಿಂದ ಪೀಠಾಸೀನಾಧಿಕಾರಿ ಹುದ್ದೆಖಾಲಿ ಇದೆ. ಈ ರೀತಿ ನ್ಯಾಯಿಕ ಮತ್ತು ಅರೆನ್ಯಾಯಿಕ ಸಂಸ್ಥೆಗಳ ಹುದ್ದೆಗಳನ್ನು ದೀರ್ಘಕಾಲದವರಿಗೆ ಖಾಲಿ ಬಿಟ್ಟರೆ ನ್ಯಾಯ ಪಡೆಯಬಯಸುವವರಿಗೆ ಅದರಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಸೈಲೆಂಟ್ ಸ್ಪೆಕ್ಟೇಟರ್ ಆಗಿರಬಾರದು ಎಂದು ಖಾರವಾಗಿ ಹೇಳಿತು.
ಅಲ್ಲದೆ, ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ಹೇಳುತ್ತಿದ್ದಾಾರೆ. ಇದು ಕಣ್ಣೊರೆಸುವ ತಂತ್ರವೆಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೇಂದ್ರ ಸರ್ಕಾರಕ್ಕೆ ಕ್ರಮ ಕೈಗೊಳ್ಳುವ ಬದಲು 'ಕಾಗದದ ಮೇಲೆ ಕುದರೆ ಓಡಿಸುವುದರಲ್ಲಿ' ಕೇಂದ್ರ ಸರ್ಕಾರಕ್ಕೆ ಆಸಕ್ತಿ ಇದ್ದಂತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.
ಇಷ್ಟಾದ ಮೇಲೆ ಕೇಂದ್ರ ಸರ್ಕಾರದಿಂದ ಸಕರಾತ್ಮಕ ಸ್ಪಂದನೆ ಸಿಗಲಿದೆ ಎಂಬ ವಿಶ್ವಾಸವಿದೆ. ಒಂದು ವೇಳೆ ವಿಫಲವಾದಲ್ಲಿ 10 ಲಕ್ಷ ರೂ. ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತು.












Click it and Unblock the Notifications