ಮಾನಸ ಸರೋವರ ಯಾತ್ರೆಯ ಸಹಾಯಧನಕ್ಕೆ ಅರ್ಜಿ ಹಾಕಿ
ಬೆಂಗಳೂರು, ಜೂನ್ 02 : ಕರ್ನಾಟಕ ಸರ್ಕಾರ ಇದೇ ಮೊದಲ ಬಾರಿಗೆ ಮಾನಸ ಸರೋವರ ಯಾತ್ರಿಕರಿಗೆ ಸಹಾಯ ಧನ ನೀಡಲು ಮುಂದಾಗಿದೆ. ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.
2016-17ನೇ ಸಾಲಿನಿಂದ ಕರ್ನಾಟಕ ಸರ್ಕಾರ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಿಕರಿಗೆ ಪ್ರೋತ್ಸಾಹ ಧನ ನೀಡಲಿದೆ. ರಾಜ್ಯದ ಖಾಯಂ ನಿವಾಸಿಗಳು ಮಾರ್ಗಸೂಚಿಗಳ ಷರತ್ತುಗಳಿಗೆ ಒಳಪಟ್ಟವರು ಮಾತ್ರ ಧನಸಹಾಯ ಪಡೆಯಲು ಅರ್ಹರು. [ಬೆಂಗಳೂರು ಯಾತ್ರಾರ್ಥಿಗೆ ನೆರವಿನ ಹಸ್ತ ಚಾಚಿದ ಅನಂತ್ ಕುಮಾರ್]

ಸಹಾಯಧನವನ್ನು ನೀಡಲು ಪಾಸ್‍ಪೋರ್ಟ್‍ನಲ್ಲಿ ಇರುವ ಕರ್ನಾಟಕ ರಾಜ್ಯದ ವಿಳಾಸವನ್ನು ಪರಿಗಣಿಸಲಾಗುತ್ತದೆ. ಈಗಾಗಲೇ ಮಾನಸ ಸರೋವರ ಯಾತ್ರೆ ಕೈಗೊಂಡು ಸರ್ಕಾರದಿಂದ ಧನಸಹಾಯ ಪಡೆದ ಯಾತ್ರಿಕರು, ಇದೇ ಉದ್ದೇಶಕ್ಕಾಗಿ ಎರಡನೇ ಬಾರಿಗೆ ಈ ಧನಸಹಾಯ ಪಡೆಯಲು ಅರ್ಹರಾಗುವುದಿಲ್ಲ. [ಮಾನಸ ಸರೋವರ ಯಾತ್ರಿಕರಿಗೆ ಸುಷ್ಮಾ ಶುಭ ಹಾರೈಕೆ]
ಸರ್ಕಾರದ ಮಾರ್ಗಸೂಚಿಗಳಿಗೆ ಒಳಪಟ್ಟು ಧನಸಹಾಯ ಪಡೆಯಲು ಇಚ್ಚಿಸುವ ಯಾತ್ರಿಕರು ತಾವು ಯಾತ್ರೆ ಮುಗಿಸಿದ್ದಕ್ಕೆ ಪಡೆಯುವ ಪ್ರಮಾಣ ಪತ್ರದ ದಿನಾಂಕದಿಂದ 4 ತಿಂಗಳ ಒಳಗೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಕಚೇರಿಯಲ್ಲಿ ಖುದ್ದಾಗಿ ಪಡೆದು ಸಲ್ಲಿಸಬೇಕು. [ಯಾತ್ರಿಗಳ ಗಮನಕ್ಕೆ : ಮಾನಸ ಸರೋವರಕ್ಕೆ ಹಾದಿ ಸುಗುಮ!]
ನಿಗದಿತ ಅವಧಿ ಮೀರಿ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ 080-26709689 ದೂರವಾಣಿ ಸಂಖ್ಯೆಗೆ ಕರೆ ಮಾಡಿ.
ಅರ್ಜಿ ಪಡೆಯಲು ಮತ್ತು ಸಲ್ಲಿಸಲು ವಿಳಾಸ : ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, 4ನೇ ಮಹಡಿ, ಶ್ರೀ ಮಿಂಟೋ ಶ್ರೀ ಆಂಜನೇಯ ವಾರ್ತಾ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು -18.












Click it and Unblock the Notifications