ಮೊರಾರ್ಜಿ, ಕಿತ್ತೂರು ರಾಣಿ ವಸತಿ ಶಾಲೆಗಳಿಗೆ ಅರ್ಜಿ ಆಹ್ವಾನ
ಕೊಪ್ಪಳ, ಫೆ.4 : ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿಯವರೆಗೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 6 ರಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡಲಾಗುತ್ತದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ.[ದಿಢೀರನೆ ಶಾಲೆಗೆ ಬಂದ ಸಿದ್ದು ಕಂಡು ಮಕ್ಕಳಿಗೆ ಹಿಗ್ಗೋಹಿಗ್ಗು]

ಅರ್ಹತೆ : ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ 2 ಲಕ್ಷ ರೂ., ಪರಿಶಿಷ್ಟ ವರ್ಗದವರಿಗೆ 2 ಲಕ್ಷ ರೂ., ಪ್ರವರ್ಗ-1 ರ ವಿದ್ಯಾರ್ಥಿಗಳಿಗೆ 1 ಲಕ್ಷ ರೂ., ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಯವರಿಗೆ 44, 500 ರೂ.ಗಳ ಆದಾಯ ಮಿತಿ ನಿಗದಿಪಡಿಸಲಾಗಿದೆ. [ಪ್ರವೇಶ ಪರೀಕ್ಷೆ, ಪಾಲಕರ ಸಂದರ್ಶನ ನಡೆಸಿದರೆ ಹುಷಾರ್]
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೇ.50 ಸೀಟುಗಳು ಬಾಲಕಿಯರಿಗೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಶೇ.100 ರಷ್ಟು ಸೀಟುಗಳು ಬಾಲಕಿಯರಿಗೆ ಲಭ್ಯವಿರುತ್ತವೆ. ಒಮ್ಮೆ ಈ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರಿದಲ್ಲಿ 12ನೇ ತರಗತಿಯವರೆಗೆ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ.
50 ವಿದ್ಯಾರ್ಥಿಗಳಿಗೆ ಅವಕಾಶ : ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 2015-16 ನೇ ಸಾಲಿನಲ್ಲಿ 6ನೇ ತರಗತಿಗೆ 50 ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಕರ್ನಾಟಕದ ಯಾವುದೇ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಈಗಾಗಲೇ ಮಾಡಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮಾರ್ಚ್ 29ರಂದು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಅರ್ಹತೆ ಮತ್ತು ಮೀಸಲಾತಿಯಂತೆ ಪಟ್ಟಿ ತಯಾರಿಸಿ ಮೆರಿಟ್ ಆಧಾರದ ಮೇಲೆ ಮೀಸಲಾತಿ ಅನ್ವಯ ಕೌನ್ಸಿಲಿಂಗ್ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ.
ಅರ್ಜಿ ಎಲ್ಲಿ ದೊರೆಯುತ್ತದೆ : ಪ್ರವೇಶದ ಅರ್ಜಿಗಳು ಜಿಲ್ಲೆಯ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳ ಕಛೇರಿಗಳಲ್ಲಿ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿ, ತಾಲೂಕಿನ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳಲ್ಲಿ ದೊರೆಯುತ್ತದೆ.
ಫೆಬ್ರವರಿ 2 ರಿಂದ ಅರ್ಜಿಯನ್ನು ನೀಡಲಾಗುತ್ತಿದೆ. ಅರ್ಜಿಯನ್ನು ಸಂಬಂಧಪಟ್ಟ ವಸತಿ ಶಾಲಾ ಪ್ರವೇಶ ಪರೀಕ್ಷಾ ಪ್ರಾಂಶುಪಾಲರಿಗೆ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 25. ಪ್ರವೇಶ ಪರೀಕ್ಷೆ ಮಾರ್ಚ್ 29 ಭಾನುವಾರ ಬೆಳಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದೆ. ಅರ್ಹತಾ ಪಟ್ಟಿ ಏಪ್ರಿಲ್ 9 ರಂದು ಪ್ರಕಟಗೊಳ್ಳಲಿದೆ.












Click it and Unblock the Notifications