ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಅಕ್ಕಿ ಭಾಗ್ಯ!
ಬೆಂಗಳೂರು, ಫೆ.4 : ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 'ಅನ್ನಭಾಗ್ಯ' ಯೋಜನೆ ಇರುವಂತೆ ಎಪಿಎಲ್ ಕಾರ್ಡುದಾರರಿಗೂ ಪಡಿತರ ವಿತರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.
ಬುಧವಾರದ ವಿಧಾನಸಭೆ ಕಲಾಪಕ್ಕೂ ಮೊದಲು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು. [ಎಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಣೆ]

ಶಾಸಕರು ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಸ್ವಾಗತಿಸಿದರು. ಕೆಜಿಗೆ 10 ರೂ.ದರ ನಿಗದಿ ಮಾಡಿ ವಿತರಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ತಮಿಳುನಾಡು ಮಾದರಿಯಲ್ಲಿ ಕಡಿಮೆ ದರದಲ್ಲಿ ಊಟ ನೀಡುವ ಕ್ಯಾಂಟೀನ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. [ರಾಜ್ಯದ ಜನರಿಗೆ 10 ರೂ.ಲಾಟರಿ ಭಾಗ್ಯ?]
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್ ಅವರು, ನ್ಯಾಯಬೆಲೆ ಅಂಗಡಿಯಲ್ಲಿ ನಕಲಿ ಕಾರ್ಡ್ ಸಿಕ್ಕರೆ ಅಂಗಡಿ ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದರೆ ದಾಖಲಿಸಿ, ಪರವಾನಿಗೆ ರದ್ದುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು. ರಾಜ್ಯ ಯೋಜನಾ ಆಯೋಗ ಲಾಟರಿಯನ್ನು ಆರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವ ಬಗ್ಗೆಯೂ ಚರ್ಚೆ ನಡೆಯಿತು. ಶಾಸಕರು ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ 'ಅನ್ನಭಾಗ್ಯ' ಯೋಜನೆ ಜಾರಿಯಲ್ಲಿದೆ. ಅದರಂತೆ, ಎಪಿಎಲ್ ಕಾರ್ಡುದಾರರಿಗೆ ತಿಂಗಳಿಗೆ 15 ಕೆಜಿ ಅಕ್ಕಿ, ಎಣ್ಣೆ, ಬೆಳೆ, ಐಯೋಡೈಸ್ಡ್ ಉಪ್ಪನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಯೋಜನಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದರು.












Click it and Unblock the Notifications