MLA Arrest: ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಆಘಾತ; ಶಾಸಕ ಸತೀಶ್ ಸೈಲ್ ಬಂಧನ
ಜಾರಿ ನಿರ್ದೇಶನಾಲಯವು (ಇಡಿ) ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಗ್‌ಶಾಕ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಇಡಿ ಬಂಧಿಸಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್‌ನ ಮೂರನೇ ಶಾಸಕ ಇಡಿಯಿಂದ ಬಂಧನಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕರಾದ ವಿರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಅವರನ್ನು ಇಡಿ ಬಂಧಿಸಿತ್ತು.
ಇದೀಗ ಕಾಂಗ್ರೆಸ್‌ನ ಮತ್ತೋರ್ವ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ರಮ ಅದಿರು ಸಾಗಾಟ ಕೇಸ್ ಸಂಬಂಧ ಕಳೆದ ಆಗಸ್ಟ್‌ನಲ್ಲಿ ಶಾಸಕ ಸತೀಶ್ ಸೈಲ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನ ಜಪ್ತಿ ಮಾಡಿದ್ದರು.

ಕಾರವಾರ ಮಾತ್ರವಲ್ಲದೆ ಗೋವಾ, ಮುಂಬೈ ಮತ್ತು ದೆಹಲಿಯಲ್ಲೂ ಶಾಸಕ ಸತೀಶ್ ಸೈಲ್‌ಗೆ ಸಂಬಂಧಿಸಿದ ಕೆಲ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿತ್ತು. ಅಲ್ಲಿನ ದಾಳಿ ವೇಳೆಯೂ ಭಾರೀ ಪ್ರಮಾಣದ ನಗದು, ಚಿನ್ನಾಭರಣ ಸಿಕ್ಕಿತ್ತು. ಸತೀಶ್ ಸೈಲ್‌ಗೆ ಸಂಬಂಧಿಸಿದ 14 ಕೋಟಿ ಠೇವಣಿ, ಚಿನ್ನಾಭರಣ ಇಡಿ ವಶಕ್ಕೆ ಪಡೆದಿತ್ತು. ಸದ್ಯ 1.68 ಕೋಟಿ ರೂಪಾಯಿ ಹಾಗೂ 6.75 ಕೆಜಿ ಚಿನ್ನಾಭರಣ ವಶಕ್ಕೆ ಪಡೆದು ಸತೀಶ್ ಸೈಲ್ ಅವರನ್ನ ಅಧಿಕಾರಿಗಳು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಬೆಂಗಳೂರಿಗೆ ಬಂದ ನಂತರ ನ್ಯಾಯಾಧೀಶರ ಮುಂದೆ ಇಂದು ರಾತ್ರಿಯೇ ಹಾಜರುಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೇಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಅದಿರು ಲೂಟಿಕೋರ ಶಾಸಕ ಸತೀಶ್ ಸೈಲ್ ವಿರುದ್ಧದ 6 ಪ್ರಕರಣಗಳಲ್ಲೂ ಶಿಕ್ಷೆ ವಿಧಿಸಿ ಅಂತಿಮ ಆದೇಶ ಹೊರಡಿಸಿದ್ದ ಕೋರ್ಟ್, ಒಟ್ಟು 44 ಕೋಟಿಗೂ ಹೆಚ್ಚು ದಂಡ ವಿಧಿಸಿತ್ತು. ನಿಯಮಗಳ ಪ್ರಕಾರ 2 ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಸತೀಶ್ ಸೈಲ್ ಶಾಸಕ ಸ್ಥಾನವು ಅನರ್ಹಗೊಳ್ಳಲಿದೆ ಎಂದು ಹೇಳಲಾಗಿತ್ತು.
ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ, ಒಳಸಂಚು, ವಂಚನೆ ಕಳ್ಳತನ ಮಾಡಿ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಉಂಟು ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿ ಏಳು ಮಂದಿಗೆ ಗರಿಷ್ಠ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ ವಿಧಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಬೇಲೇಕೇರಿ ಬಂದರಿನಲ್ಲಿ ವಶಕ್ಕೆ ಪಡೆದು ಸಂಗ್ರಹಿಸಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕಳವು ಮಾಡಿ ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್ ಶಿಕ್ಷೆಗೆ ಗುರಿಯಾಗಿದ್ದರು.












Click it and Unblock the Notifications