Anke Gowda: 25 ಲಕ್ಷ ಪುಸ್ತಕಗಳ ಗತಿ ಏನು - ಅಂಕೇಗೌಡರ ಕಷ್ಟ ಹಂಚಿಕೊಂಡ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್
ಮಂಡ್ಯ ಜಿಲ್ಲೆಯ ಪಾಂಡವಪುರದ ಅಪ್ಪಟ ಪುಸ್ತಕ ಪ್ರೇಮಿ ಅಂಕೇಗೌಡರಿಗೆ ಕರ್ನಾಟಕದ ಹಲವು ಗಣ್ಯರು ಶುಭಕೋರಿದ್ದಾರೆ. "ಪ್ರೀತಿಯ ಶ್ರೀ ಅಂಕೇಗೌಡರಿಗೆ" ಎನ್ನುವ ಸಾಲುಗಳೊಂದಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿಶೇಷ ಬರಹ ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ ಪದ್ಮಶ್ರೀ ಪುರಸ್ಕೃತ ಅಂಕೇಗೌಡ ಅವರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಂಕಷ್ಟವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಹಂಚಿಕೊಂಡಿದ್ದಾರೆ.
"ಪ್ರೀತಿಯ ಶ್ರೀ ಅಂಕೇಗೌಡರಿಗೆ" ನಿಮಗೆ "ಪದ್ಮಶ್ರೀ" ಪ್ರಶಸ್ತಿ ಸಂದಿದೆ.ಅಭಿನಂದಿಸಲು ಕರೆ ಮಾಡಿದ್ದೆ. ನೀವು ಸಿಗಲಿಲ್ಲ. ಕಳೆದ ತಿಂಗಳು ನಿಮ್ಮ ಗ್ರಂಥಾಲಯಕ್ಕೆ ಬಂದಿದ್ದೆ. ಬಹಳ ವ್ಯಥೆಯಿಂದ ಮಾತನಾಡಿದಿರಿ. ಈ ಇಪ್ಪತ್ತೈದು ಲಕ್ಷ ಪುಸ್ತಕಗಳ ಗತಿ ಏನು? ಅವು ಒಪ್ಪವಾಗಿ ವರ್ಗೀಕರಣವಾಗಿ ಕಪಾಟಿನಲ್ಲಿ ಜೋಡಿಸಲ್ಪಟ್ಟಿಲ್ಲ. ಮೆದೆಯ ಹುಲ್ಲು ಅಡಕಿದ ಹಾಗೆ, ಹಲವು ಧಾನ್ಯ ಬೆರೆತ ಏಕ ರಾಶಿಯ ಹಾಗೆ, ದೂಳು ತುಂಬಿದ ತಬ್ಬಲಿಗಳಂತೆ ಮಲಗಿವೆ. ಅಪರೂಪದ ಹಳೆಯ ಗ್ರಂಥಗಳಿವೆ.ಆದರೆ ಅವು ಸುಸ್ಥಿತಿಯಲ್ಲಿಲ್ಲ. ಬೇಸಗೆಯಲ್ಲಿ ಬೆಂಕಿ ಅವಘಡದ ಮತ್ತು ಗೆದ್ದಲಿನ ಅಪಾಯಗಳಿವೆ.

ಪುಸ್ತಕ ಸಂಗ್ರಹಕ್ಕೆ ಭಾವನಾತ್ಮಕ ಆದರ್ಶ ಸಾಕು: ಆದರೆ ನಿರ್ವಹಣೆಗೆ ವಾಸ್ತವ ನೆಲೆಗಟ್ಟಿನ ಕ್ರಿಯಾತ್ಮಕ ಯೋಜನೆಗಳು ಬೇಕು. 78ರ ಹರೆಯದ ನೀವು ಇನ್ನಾದರೂ ಪ್ರಾಯೋಗಿಕವಾಗಿ ಚಿಂತಿಸಬೇಕು. 'ಪಾಂಡವಪುರದ ಪುಸ್ತಕಾಧೀಶ' ಎಂದು ನಾನೊಮ್ಮೆ ಲೇಖನ ಬರೆದಿದ್ದೆ. ನಾನು, ನನ್ನಂಥವರು ತೋರುವ ಇಂಥ ಪ್ರೀತಿ, ನೆರವು ಸಹಕಾರಗಳಿಂದ ಹೆಚ್ಚಿನ ಲಾಭವಿಲ್ಲ. ವ್ಯಕ್ತಿ, ಸರ್ಕಾರ, ಸಮಾಜಗಳು ಕೂಡಾ ನಿಮಗೆ ಸ್ಪಂದಿಸಿವೆ. ಅದು ನಿಮಗೆ ಸಾಕಾಗುತ್ತಿಲ್ಲ. ನಿಮಗೆ ಹೆಚ್ಚು ಹಣ ಬೇಕು.
ಡಿಜಿಟಲೀಕರಣ ಮತ್ತು ಕ್ಷೀಣವಾಗುತ್ತಿರುವ ಓದಿನ ಈ ಯುಗದಲ್ಲೂ ನಿಮ್ಮ ಗ್ರಂಥಾಲಯ ಅಮೂಲ್ಯ.ಈ "ಪದ್ಮಶ್ರೀ" ಬರಿಯ ಕಿರೀಟವೋ ಅಥವಾ ಬೇರೆ ಆರ್ಥಿಕ ಲಾಭಗಳಿವೆಯೋ ತಿಳಿಯೆ. ಆದರೆ ಈ ಸಂದರ್ಭವು ನಿಮ್ಮ ಸಮಸ್ಯೆಗೆ ರಾಜ್ಯ ರಾಷ್ಟ್ರ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ದೊರಕಿಸುವ ದಾರಿಯೊಂದನ್ನು ದೊರಕಿಸಲಿ ಎಂದು ಆಶಿಸುತ್ತೇನೆ. ನಿಮ್ಮ ಆರೋಗ್ಯದ ಮೇಲೆ ನಿಗಾ ಇರಲಿ. ಪ್ರಶಸ್ತಿಗಾಗಿ ಅಭಿನಂದನೆಗಳು. ಪ್ರೀತಿಯಿಂದ ನಾಗತಿಹಳ್ಳಿ ಚಂದ್ರಶೇಖರ್ ಎನ್ನುವ ವಿಶೇಷ ಬರಹವನ್ನು ಹಂಚಿಕೊಂಡಿದ್ದಾರೆ. ಈ ಬರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಎಚ್.ಡಿ ಕುಮಾರಸ್ವಾಮಿ ಟ್ವೀಟ್
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅಂಕೇಗೌಡ ಅವರಿಗೆ ಶುಭಕೋರಿದ್ದಾರೆ. ಮಂಡ್ಯ ಜಿಲ್ಲೆಯ ಹೆಮ್ಮೆಯ ಪುತ್ರ, ಪಾಂಡವಪುರದ ಅಪ್ಪಟ ಪುಸ್ತಕ ಪ್ರೇಮಿ ಆಗಿರುವ ಶ್ರೀ ಅಂಕೇಗೌಡರಿಗೆ ಹೃದಯಪೂರ್ವಕ ಅಭಿನಂದನೆಗಳು. ಪುಸ್ತಕಗಳಿಗಾಗಿ ತಮ್ಮ ಬದುಕನ್ನೇ ಮುಡಿಪಿಟ್ಟು, ಜ್ಞಾನ ದಾಸೋಹದಲ್ಲಿ ಸಾರ್ಥಕ ಕಾಯಕ ಮಾಡುತ್ತಿರುವ ಶ್ರೀಯುತರಿಗೆ 2026ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಅವರಂತೆಯೇ ನಾನೂ ಉತ್ಕಟವಾಗಿ ಪುಸ್ತಕ ಪ್ರೇಮಿ, ನನ್ನಂಥ ಅನೇಕರಿಗೆ ಸ್ಫೂರ್ತಿ ಆಗಿರುವ ಗೌಡರಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಅವರ ಪುಸ್ತಕ ಸಂಗ್ರಹದ ಹಂಬಲಕ್ಕೆ ಅಳಿಲು ಸೇವೆ ಸಲ್ಲಿಸಿದ್ದೆ ಎಂಬುದು ನನ್ನ ಪಾಲಿಗೆ ಧನ್ಯತೆಯಷ್ಟೇ. ಪ್ರಚಾರದಿಂದ ಸದಾ ದೂರವೇ ಇರುವ ಅವರು ಯಾವ ನಿರೀಕ್ಷೆ, ಹಂಬಲವೂ ಇಲ್ಲದೆ ಎಲೆಮರೆ ಕಾಯಿಯಂತೆ ತಾಯಿ ಸರಸ್ವತಿಯ ಸೇವೆ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ ಹಾಗೂ ಅವರ ಕೀರ್ತಿ ಇನ್ನಷ್ಟು ಎತ್ತರಕ್ಕೆ ಹರಡಲಿ ಎಂದು ಮನಸಾರೆ ಹಾರೈಸುತ್ತೇನೆ ಎಂದು ಶುಭಕೋರಿದ್ದಾರೆ.












Click it and Unblock the Notifications