ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು ಎಂದ ಅನಂತ್ ಕುಮಾರ್ ಹೆಗಡೆ: ಗೃಹ ಸಚಿವರು ಏನಂದ್ರು?
ಬೆಂಗಳೂರು, ಮಾರ್ಚ್ 11: ಸಂವಿಧಾನ ತಿದ್ದುಪಡಿ ಮಾಡಲು ಬಿಜೆಪಿ 400 ಸ್ಥಾನಗಳನ್ನು ಗೆಲ್ಲಬೇಕು. ಸಂವಿಧಾನ ತಿದ್ದುಪತಿ ಮಾಡುವುದಾದರೇ ಬಹುಮತ ಅಗತ್ಯವಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದು, ಈ ಹೇಳಿಕೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುತ್ತಿರುವ ಸಂಸದ ಅನಂತಕುಮಾರ್ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.

ಅಂಬೇಡ್ಕರ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಸಂವಿಧಾನ ಇಲ್ಲದೇ ಹೋಗಿದ್ದಾರೆ ನಾನು ಪ್ರಧಾನಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಪಕ್ಷದ ಸಂಸದರೊಬ್ಬರು ಪದೇಪದೆ ಸಂವಿಧಾನ ಬದಲಾವಣೆಯ ಮಾತುಗಳನ್ನು ಆಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನು ಆಡಿದರೆ ಸರಿಪಡಿಸಬೇಕು. ಆದರೆ, ಸಂಸದ ಅನಂತಕುಮಾರ್ ಅವರ ಹೇಳಿಕೆಯಿಂದ ದೂರ ಇದ್ದೀವಿ ಎಂದು ಹೇಳಿದರೆ ಸಾಲುವುದಿಲ್ಲ. ಪಕ್ಷದಿಂದ ಹೊರಹಾಕಬೇಕು ಅಥವಾ ನಿಯಂತ್ರಿಸಬೇಕು. ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸರಿಯಾದ ಅಭ್ಯರ್ಥಿಯೇ ಇಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳಬಹುದು. ಆದರೆ, ಚುನಾವಣೆ ನಂತರ ವಾಸ್ತವಾಂಶ ಏನೆಂಬುದು ಗೊತ್ತಾಗಲಿದೆ. ಸಚಿವ ಎಚ್.ಸಿ.ಮಹದೇವಪ್ಪ ಅವರ ಸ್ಪರ್ಧೆಯ ಮಾತುಗಳು ಕೇಳಿಬರುತ್ತಿವೆ. ನನಗೆ ಟಿಕೆಟ್ ಬೇಡ, ಮಗನಿಗೆ ನೀಡುವಂತೆ ಮಹದೇವಪ್ಪ ಅವರು ಹೇಳುತ್ತಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ ಮಾಡಲಿದೆ ಎಂದು ತಿಳಿಸಿದರು.
ತುಮಕೂರಿನಲ್ಲಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಯಾರು ವಿರೋಧ ಮಾಡುತ್ತಿದ್ದಾರೆ, ಅವರನ್ನು ಮನವೊಲಿಸುವ ಕೆಲಸವನ್ನು ನಿನ್ನೆಯಿಂದ ಆರಂಭಿಸಲಾಗಿದೆ. ಯಾರಿಗೂ ಅಸಮಾದಾನವಿದೆ ಅವರಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಲಾಗಿದೆ. ಚುನಾವಣೆ ಎಂದ ಮೇಲೆ ಅಸಮಾದಾನ ಸಹಜ. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.












Click it and Unblock the Notifications