ಪ್ರೀತಿ ನಿರಾಕರಿಸಿದವಳಿಗೆ ಚೂರಿ ಹಾಕಿದ ಭಗ್ನ ಪ್ರೇಮಿ
ಹುಬ್ಬಳ್ಳಿ, ಡಿಸೆಂಬರ್, 01: ಪ್ರೀತಿಯ ಬೇಡಿಕೆ ನಿರಾಕರಿಸಿದ ಯುವತಿಗೆ ಭಗ್ನಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ ಘಟನೆ ನವೆಂಬರ್ 29ರ ಭಾನುವಾರದಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಶಾಪಿಂಗ್ ಮಾಲ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ವೆಂಕಟೇಶ್ವರ ನಿವಾಸಿ ಮೇಘನಾ (20) ಚಾಕುವಿನ ಇರಿತಕ್ಕೊಳಗಾದ ಯುವತಿ. ರಾಯಚೂರು ಜಿಲ್ಲಾ ಮಾನ್ವಿಯ ಅಭಿನವ ಕುಲಕರ್ಣಿ (24) ಯುವತಿಯನ್ನು ಕೊಲ್ಲಲು ಯತ್ನಿಸಿದ ಯುವಕ. ಈತ ಆಕೆಯನ್ನು ಕೊಲ್ಲಲು ಯತ್ನಿಸಿದ ಬಳಿಕ ತಾನೇ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.[ಪ್ರೀತ್ಸೋಕೆ ಒಲ್ಲೆ ಎಂದವಳ ಬೆರಳು ಕತ್ತರಿಸಿದ ಭಗ್ನಪ್ರೇಮಿ]

ಮೇಘನಾ ನಗರದ ಗ್ಲೋಬಲ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಈಕೆ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಅಭಿನವ ಎಂಬಾತನ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಬಳಿಕ ಅಭಿನವ ಒಂದು ದಿನ ಆಕೆಯ ಮುಂದೆ ತನ್ನ ಪ್ರೇಮ ನಿವೇದನೆ ಇಟ್ಟಿದ್ದು, ಪ್ರೀತಿಸುವಂತೆ ಪೀಡಿಸಿದ್ದಾನೆ.
ಈ ವಿಷಯವನ್ನು ಮಾತನಾಡಲು ಅಭಿನವ, ನಗರದ ಅರ್ಬನ್ ಓಯಾಸಿಸ್ ಮಾಲ್ ನ ಮೊದಲನೇ ಮಹಡಿಗೆ ಬರುವಂತೆ ಹೇಳಿದ್ದಾನೆ. ಮೇಘನಾ ಮಾಲ್ ಗೆ ತೆರಳಿದಾಗ ಪುನಃ ಪ್ರೇಮದ ವಿಚಾರ ಪ್ರಸ್ತಾಪಿಸಿದ್ದಾನೆ. ಇದಕ್ಕೆ ಮೇಘನಾ ಒಪ್ಪದಿದ್ದಾಗ ನೊಂದ ಅಭಿನವ ಆಕೆಯ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿ ಅದೇ ಚಾಕುವಿನಿಂದ ತಾನು ಇರಿದುಕೊಂಡಿದ್ದಾನೆ.[ಹಣ ಪಡೆದು ಕೈಕೊಟ್ಟ ಕಲಾವಿದ, ಕಲಾವಿದೆ ನೇಣಿಗೆ ಶರಣು]
ಮೇಘನಾ ಮತ್ತು ಅಭಿನವನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗೋಕುಲ್ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications