Amul vs KMF Row : ಕೆಎಂಎಫ್ vs ಅಮುಲ್; ಪತ್ರದ ಮೂಲಕ ಸ್ಪಷ್ಟನೆ ಕೊಟ್ಟ ಕೆಎಂಎಫ್
ಬೆಂಗಳೂರು, ಏಪ್ರಿಲ್ 09; ಅಮುಲ್ ಕಣ್ಣು ಮುಂಬೈ, ಹೈದರಾಬಾದ್, ಚೆನ್ನೈ ಬಳಿಕ ಬೆಂಗಳೂರಿನ ಮೇಲೆ ಬಿದ್ದಿದೆ. ನಗರದಲ್ಲಿ ಅಮುಲ್ ಉತ್ಪನ್ನಗಳ ಹೋಂ ಡೆಲವರಿ ಆಂಭಿಸುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಇದು ಕರ್ನಾಟಕದ ಹೆಮ್ಮೆಯ ಕೆಎಂಎಫ್ ಮುಳುಗಿಸುವ ಹುನ್ನಾರ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಭಾರೀ ಚರ್ಚೆ ನಡೆದಿದೆ.
ಅಮುಲ್ vs ಕರ್ನಾಟಕದ ಕೆಎಂಎಫ್ ನಡುವಿನ ಚರ್ಚೆಯ ಬಗ್ಗೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ಸ್ಪಷ್ಟನೆಯೊಂದನ್ನು ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಬ್ರಾಂಡ್ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತು ಎಂಬ ವಿಷಯವನ್ನು ಪತ್ರ ಒಳಗೊಂಡಿದೆ. ಕರ್ನಾಟಕ ಹಾಲು ಮಹಾಮಂಡಳಿ ಪರವಾಗಿ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಈ ಪತ್ರ ಬಿಡುಗಡೆ ಮಾಡಲಾಗಿದೆ.

ಈ ಪತ್ರದಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳವು ದೇಶದ 2ನೇ ಅತೀ ದೊಡ್ಡ ಸಹಕಾರ ಹಾಲು ಮಹಾಮಂಡಳ ಸಂಸ್ಥೆಯಾಗಿದ್ದು, 26 ಲಕ್ಷ ಗ್ರಾಮೀಣ ರೈತರಿಂದ ದಿನಂಪ್ರತಿ ಸರಾಸರಿ 85 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿ, ಸುಮಾರು 150ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ ಕಳೆದ 4 ದಶಕಗಳಿಂದ ಒದಗಿಸುತ್ತಿದೆ ಎಂದು ವಿವರಣೆ ನೀಡಲಾಗಿದೆ.
ಹಾಲಿನ ಶೇಖರಣೆಯನ್ನು ಮುಂದಿನ ದಿನಗಳಲ್ಲಿ ಪ್ರತಿನಿತ್ಯ 1 ಕೋಟಗೂ ಅಧಿಕ ಲೀಟರ್ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ ಹಾಲಿನ ಸರಾಸರಿ ಶೇಖರಣೆ, ಶೇ.6 ರಿಂದ 7ರಷ್ಟು ಪ್ರಗತಿಯಿರುತ್ತದೆ, ಮಾರಾಟವು ಶೇ.25 ರಷ್ಟು ಪ್ರಗತಿಯನ್ನು ಸಾಧಿಸುತ್ತಾ, ದೇಶದ ವಿವಿಧ ರಾಜ್ಯಗಳಲ್ಲಿ ಹೊರ ರಾಜ್ಯಗಳಲ್ಲೂ ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಾ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ರಾಂಡ್ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೆಎಂಎಫ್ ಸ್ಪಷ್ಟನೆ; ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್)ದ ಬಗ್ಗೆ ಕೆಲವು ವದಂತಿಗಳು ಹರಿದಾಡುತ್ತಿದೆ. ಕರ್ನಾಟಕ ಹಾಲು ಉತ್ಪಾದನಾ ಮಹಾಮಂಡಳವನ್ನು ಮತ್ತೊಂದು ದೊಡ್ಡ ಸಹಕಾರಿ ಸಂಸ್ಥೆಯೊಂದಿಗೆ ವಿಲೀನ ಮಾಡಲಾಗುತ್ತದೆ. ನಂದಿನಿ ಬ್ರಾಂಡ್ ಅನ್ನು ಮತ್ತೊಂದು ಸಹಕಾರಿ ಸಂಸ್ಥೆಗೆ ಮಾರಾಟ ಮಾಡಲಾಗುತ್ತಿದೆ, ನಂದಿನಿ ಬ್ರಾಂಡ್ ಹಾಲು ಇನ್ನೂ ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಅನ್ನೋ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು ಮತ್ತು ಅಂತಹ ಯಾವುದೇ ಬೆಳವಣಿಗೆಗಳು ಕೆಎಂಎಫ್‌ನಲ್ಲಿ ನಡೆದಿರುವುದಿಲ್ಲವೆಂದು ತಿಳಿಸಲು ಬಯಸುತ್ತೇವೆ ಎಂದು ಸ್ಪಷ್ಟಪಡಿಸಲಾಗಿದೆ.

ಕೆಎಂಎಫ್ ಹೆಚ್ಚುವರಿಯಾಗಿ ಹಾಲು ಉತ್ಪಾದನೆ ಮಾಡುವುದಕ್ಕಾಗಲಿ, ವ್ಯಾಪಾರ ವೃದ್ಧಿಗೋಸ್ಕರವಾಗಲಿ ದೇಶದ ಯಾವುದೇ ಸಹಕಾರ ಸಂಸ್ಥೆ ಅಥವಾ ಹಾಲು ಉತ್ಪಾದನಾ ಮಹಾಮಂಡಳಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದಿಲ್ಲ. ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆಯ ಮೂಲಕವೇ ಮನೆ ಮಾತಾಗಿರೋ ನಂದಿನಿ ಹಾಲು ಇತರೆ ಹಾಲನ ಬ್ರಾಂಡ್‌ಗಳಿಗೆ ಪೈಪೋಟಿ ನೀಡುತ್ತಾ ಮಾರುಕಟ್ಟೆಯನ್ನು ವಿಸ್ತರಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ದೇಶದ ಅನೇಕ ನಗರಗಳಲ್ಲಿ ನಂದಿನಿ ಹಾಲು ಮತ್ತು ಹಾಲನ ಉತ್ಪನ್ನಗಳು ಲಭ್ಯವಾಗುತ್ತಿದೆ.
ಅವುಗಳಲ್ಲಿ ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ ದೇಶದ ಮಧ್ಯಭಾಗವಾದ ವಿಧರ್ಭ ಪ್ರಾಂತ್ಯ (ನಾಗ್ಪುರ), ಹೈದರಾಬಾದ್, ಚೆನ್ನೈ, ಕೇರಳ ಮತ್ತು ಗೋವಾದಲ್ಲೂ ಪ್ರತಿ ನಿತ್ಯ 7 ಲಕ್ಷಕ್ಕೂ ಅಧಿಕ ಲೀಟರ್ ಹಾಲು ಮತ್ತು ಮೊಸರನ್ನು ಸ್ಥಳೀಯವಾಗಿ ಅಲ್ಲಿನ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ನಂದಿನಿ ಬ್ರಾಂಡ್‌ಅನ್ನು ದೇಶ ವ್ಯಾಪ್ತಿಯಲ್ಲಿ ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಕೆಎಂಎಫ್ ಮಾರುಕಟ್ಟೆ ವಿಸ್ತೀರ್ಣದ ಬಗ್ಗೆ ಹಲವಾರು ಯೋಜನೆಯನ್ನು ಹಮ್ಮಿಕೊಂಡಿದೆ.
26 ಲಕ್ಷ ಹೈನುಗಾರ ರೈತರ ಶ್ರಮ, 2 ಲಕ್ಷಕ್ಕೂ ಅಧಿಕ ಕಾರ್ಮಿಕರ ದುಡಿಮೆ, 6 ಕೋಟಿಗೂ ಅಧಿಕ ಗ್ರಾಹಕರ ಹಾರೈಕೆಯಿಂದ ಸಂಸ್ಥೆಯು ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಹಾಲು ಉತ್ಪಾದನಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಂತಹ ಸಂಸ್ಥೆಯ ಬಗ್ಗೆ ಸದ್ಯ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದ್ದು ಗ್ರಾಹಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಪತ್ರದ ಮೂಲಕ ತಿಳಿಸಲಾಗಿದೆ.
ಗ್ರಾಹಕರು ಎಂದಿನಂತ 'ನಂದಿನಿ' ಬ್ರಾಂಡ್‌ನ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕೊಂಡು ಪ್ರೋತ್ಸಾಹಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಪತ್ರವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಸಲು ಕೋರಿದೆ ಎಂದು ಸಹ ಮಾಧ್ಯಮಗಳಿಗೆ ಮನವಿ ಮಾಡಲಾಗಿದೆ.












Click it and Unblock the Notifications