'ನಮಗೂ ಸ್ವಲ್ಪ ರಾಜಕೀಯ ಗೊತ್ತಿದೆ' ಅಂದ್ರು ಅಂಬರೀಶ್
ಬೆಂಗಳೂರು, ನ.25 : ನಿಗಮ-ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ನಿಗಮ-ಮಂಡಳಿ ನೇಮಕಾತಿ ವಿಚಾರದಲ್ಲಿ ತಮಗೆ ಹಿನ್ನಡೆ ಉಂಟಾಗಿದೆ ಎಂದು ಸಚಿವ ಅಂಬರೀಶ್ ಅಸಮಾಧಾನ ವ್ಯಕ್ತಪಡಿಸಿದ್ದರೆ, ಬೀದರ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಅರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಿಗಮ-ಮಂಡಳಿಗಳ ಪಟ್ಟಿ ಕಂತುಕಂತಾಗಿ ಬಿಡುಗಡೆಯಾಗುತ್ತಿದೆ. ತಮ್ಮ ಬೆಂಬಲಿಗರಿಗೆ ಸ್ಥಾನ ನೀಡದ ಬಗ್ಗೆ ಮಾತನಾಡಿರುವ ವಸತಿ ಸಚಿವ ಅಂಬರೀಶ್, 'ಮಂಡ್ಯದಲ್ಲಿ ರಾಜಕೀಯ ಹೇಗಿದೆ ಎಂಬುದು ನಮಗೆ ಗೊತ್ತಿದೆ. ಪ್ರಾಮಾಣಿಕರಿಗೆ ಅವಕಾಶ ನೀಡಿ' ಎಂದು ಹೇಳಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

'ನಾನು ಸಹ ಮೂರು ಬಾರಿ ಸಂಸದನಾಗಿದ್ದವನು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆದ್ದರಿಂದ ನಿಗಮ- ಮಂಡಳಿ ನೇಮಕ ವಿಚಾರದಲ್ಲಿ ತರಾತುರಿ ಆಯ್ಕೆ ಮಾಡದೇ, ಕಾಂಗ್ರೆಸ್ ಪಕ್ಷವನ್ನು ಬೆಳೆಸುವಂಥವರಿಗೆ ಹಾಗೂ ಸ್ಥಳೀಯರಿಗೆ ಅವಕಾಶ ನೀಡಬೇಕು' ಎಂದು ಒತ್ತಾಯಿಸಿದರು. [ನಿಗಮ-ಮಂಡಳಿ ಪಟ್ಟಿ ಬಿಡುಗಡೆ, ಯಾರಿಗೆ ಯಾವ ಸ್ಥಾನ?]
'ನಿಗಮ-ಮಂಡಳಿ ನೇಮಕದ ಪಟ್ಟಿ ಇನ್ನು ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲ. ಹೀಗಾಗಿ ಬಿಡುಗಡೆಯಾದ ಮೇಲೆ ಮುಂದಿನ ಕ್ರಮದ ಬಗ್ಗೆ ನೋಡೋಣ. ನಮಗೂ ಸ್ವಲ್ಪ ರಾಜಕೀಯ ಗೊತ್ತಿದೆ' ಎಂದು ಅಂಬರೀಶ್ ಹೇಳಿದ್ದಾರೆ.
ರಾಜೀನಾಮೆ : ಅತ್ತ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿರುವ ಬೀದರ್ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಅರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅರಳಿ ಅವರು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ರಾಜ್ಯದ ಯಾವುದಾದರೂ ನಿಗಮ- ಮಂಡಳಿಗೆ ನೇಮಕ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದರು.
ವಿಷ ಕುಡಿದ ಕೆಪಿಸಿಸಿ ಸದಸ್ಯೆ : ಕೆಪಿಸಿಸಿ ಸದಸ್ಯರಾದ ಬೆಂಗಳೂರಿನ ಆರ್.ಟಿ.ನಗರದ ನಿವಾಸಿ ರಾಧಾ ಅವರು ನಿಗಮ-ಮಂಡಳಿಯಲ್ಲಿ ಸ್ಥಾನದೊರೆಯದ ಕಾರಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಳೆದೂ ತೂಗಿ ಕಾಂಗ್ರೆಸ್ ಪಟ್ಟ ಬಿಡುಗಡೆ ಮಾಡಿದರೂ ಪಕ್ಷದಲ್ಲಿ ಅಸಮಾಧಾನವೆದ್ದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದರಾಮಯ್ಯ ಅಸಮಾಧಾನವನ್ನು ಹೇಗೆ ಶಮನಗೊಳಿಸುತ್ತಾರೆ ಎಂದು ಕಾದು ನೋಡಬೇಕು.












Click it and Unblock the Notifications