ಕಾರ್ಗಲ್‌ನಲ್ಲಿ ಡಿ. 18 ರಿಂದ 'ಕಪ್ಪೆ ಹಬ್ಬ': ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಆಚರಣೆ
ಬೆಂಗಳೂರು, ಡಿ. 13: ಕರ್ನಾಟಕ ಅರಣ್ಯ ಇಲಾಖೆ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ "ಕಪ್ಪೆ ಹಬ್ಬ" ಆಚರಣೆ ಮಾಡುತ್ತಿದೆ. ಸಮಾಜದಲ್ಲಿ ಇಂಡಿಕೇಟರ್ ಗಳಾಗಿ ಕೆಲಸ ಮಾಡುವ ಕಪ್ಪೆಗಳ ಮಹತ್ವ, ಅವುಗಳ ಬದುಕಿನ ಶೈಲಿ ಕುರಿತು ಸಮಾಜಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ ಇದೇ ಡಿಸೆಂಬರ್ 18 ಮತ್ತು 19 ರಂದು ಶಿವಮೊಗ್ಗ ಜಿಲ್ಲೆಯ ಕಾರ್ಗಲ್ ನ ಮುಪ್ಪನೆ ಪ್ರಕೃತಿ ಶಿಬಿರದಲ್ಲಿ ಆಯೋಜಿಸಲಾಗಿದೆ.
ಕಪ್ಪೆಗಳ ಬಗ್ಗೆ ಅಧ್ಯಯನ ಮಾಡುವರು, ಜ್ಞಾನ ಗಳಿಸಲು ಆಸಕ್ತಿ ಉಳ್ಳವರು ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈಗಾಗಲೇ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಕುವೆಂಪು ವಿವಿಯ ವಿದ್ಯಾರ್ಥಿಗಳು ಸೇರಿ ನೂರು ವಿದ್ಯಾರ್ಥಿಗಳು ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಸಾರ್ವಜನಿಕರು ಕೂಡ 50 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಎರಡು ದಿನ ನಡೆಯಲಿರುವ ಈ ಕಪ್ಪೆ ಹಬ್ಬದಲ್ಲಿ ಪಾಲ್ಗೊಳ್ಳುವರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ವಂತ ಪ್ರಯಾಣ ವೆಚ್ಚ ಮಾತ್ರ ಭರಿಸಿಕೊಳ್ಳಬೇಕು. ವಸತಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಮೊದಲೇ ನೋಂದಾಯಸಿಕೊಳ್ಳಬೇಕು ಎಂದು ಕಪ್ಪೆ ಹಬ್ಬ ಆಯೋಜಕರು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ: ವಲಯ ಅರಣ್ಯ ಅಧಿಕಾರಿಗಳು ಕಾರ್ಗಲ್ , ಮುಪ್ಪಾನೆ ಪ್ರಕೃತಿ ಶಿಬಿರ, 8277383139 - 9448407544.

ಕಪ್ಪೆ ಹಬ್ಬದಲ್ಲಿ ಏನೇನಿರಲಿದೆ:
ನಮ್ಮ ಇಕೋ ಸಿಸ್ಟಂ ನಲ್ಲಿ ಕಪ್ಪೆಗಳದ್ದು ಮಹತ್ವದ ಪಾತ್ರವಿದೆ. ಮನುಷ್ಯನಿಗೆ ಹೋಲಿಸಿದರೆ ಕಪ್ಪೆಗಳು 800 ಮಿಲಿಯನ್ ವರ್ಷಗಳ ಹಿಂದೆಯೇ ಭೂಮಿ ಮೇಲೆ ವಾಸವಾಗಿದ್ದವು. ಅಂದರೆ ಮನುಷ್ಯರಿಗಿಂತಲೂ ಕಪ್ಪೆಗಳು ಹಳೆಯ ಜೀವಿಗಳು. ನಮ್ಮ ಇಕೋ ಸಿಸ್ಟಂ ಬಗ್ಗೆ ಮಾಹಿತಿ ಕೊಡುವ ಇಂಡಿಕೇಟರ್ ಗಳಾಗಿ ಕಪ್ಪೆಗಳು ಕೆಲಸ ಮಾಡುತ್ತವೆ. ಹತ್ತು ವರ್ಷದಿಂದ ಕಪ್ಪೆಗಳು ಕಣ್ಮರೆಯಾಗಿವೆ. ಅವು ಕಣ್ಮರೆಯಾಗಲಿಕ್ಕೆ ನಮ್ಮ ಇಕೋ ಸಿಸ್ಟಂನಲ್ಲಿ ಅಗಿರುವ ಬದಲಾವಣೆ. ಇನ್ನೂ ಹೊಸ ತಳಿಯ ಕಪ್ಪೆಗಳು ಜಾಸ್ತಿಯಾಗಿರಬಹುದು, ಅವುಗಳ ಉಗಮದ ಹಿಂದೆಯೂ ಕಾರಣ ಇರುತ್ತದೆ. ಹೀಗಾಗಿ ಕಪ್ಪೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಕಪ್ಪೆಗಳ ಸಂತತಿ ಉಳಿಸುವ ಪ್ರಯತ್ನವಾಗಿ ಇದೇ ಮೊದಲ ಬಾರಿಗೆ ಕಪ್ಪೆಗಳ ಹಬ್ಬ ಆಯೋಜನೆ ಮಾಡಲಾಗಿದೆ ಎಂದು ಕಪ್ಪೆ ಹಬ್ಬದ ಆಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ವನ್ಯಜೀವಿ ಛಾಯಾಗ್ರಾಹಕ ಓಂಕಾರ್ ಪೈ. ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕಪ್ಪೆಗಳ ಸಂರಕ್ಷಣೆ ಅವುಗಳಿಗೆ ಎದುರಾಗಿರುವ ಸಮಸ್ಯೆ ಕಪ್ಪೆಗಳ ಹೊಸ ತಳಿಯ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಿದೆ. ಕಪ್ಪೆಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸಿ ಅವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿಸುವ ಭಾಗವಾಗಿ ಈ ವರ್ಷ ಕಪ್ಪೆ ಹಬ್ಬವನ್ನು ಆಯೋಜಿಸಲಾಗಿದೆ. ಡಾ. ಗುರುರಾಜ್, ಕೆ.ವಿ. ಡಾ. ಪ್ರೀತಿ ಗುರುರಾಜ್, ಶೇಷಾದ್ರಿ ಹಾಗೂ ಅರಣ್ಯ ಅಧಿಕಾರಿಗಳು ಕಪ್ಪೆಗಳ ಮಹತ್ವದ ಬಗ್ಗೆ ಮಾತನಾಡಲಿದ್ದಾರೆ.

ಇದರಲ್ಲಿ ಪಾಳ್ಗೊಳ್ಳಲು ಇಚ್ಛಿಸುವ ಸಾರ್ವಜನಿಕರು ಮೊದಲೇ ನೋಂದಣಿ ಮಾಡಿಕೊಂಡು ಈ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈ ವರ್ಷ ಕೋವಿಡ್ ಇರುವ ಕಾರಣ ಹೆಚ್ಚು ಜನರು ಸೇರಲಿಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಕಪ್ಪೆ ಹಬ್ಬ ಆಯೋಜಿಸಿ ಕಪ್ಪೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಅರಣ್ಯ ಇಲಾಖೆ ಹೊಂದಿದೆ. ಇದು ಸಮಾಜಕ್ಕೆ ಅಗತ್ಯವೂ ಇದೆ ಎಂದು ಅವರು ತಿಳಿಸಿದರು.












Click it and Unblock the Notifications